ಮನೆ ರಾಜ್ಯ ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ: ಹೆಚ್’ಡಿಕೆ...

ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ: ಹೆಚ್’ಡಿಕೆ ವಾಗ್ದಾಳಿ

0

ಬೆಂಗಳೂರು: ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Join Our Whatsapp Group

ಆಗಸ್ಟ್‌ 1ರಿಂದ ನಂದಿನಿ ಹಾಲಿನ ದರ ಲೀಟರ್‌ ಒಂದಕ್ಕೆ ₹3 ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಇದನ್ನು ಖಂಡಿಸಿರುವ ಹೆಚ್.ಡಿ. ಕುಮಾರಸ್ವಾಮಿ, ‘ಬೆಲೆ ಏರಿಕೆ ಗ್ಯಾರಂಟಿ’ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.

ಆಲ್ಕೋಹಾಲಿನ ಬೆಲೆ ಏರಿಸಿದ ನಂತರ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆಯನ್ನೂ ಲೀಟರಿಗೆ 3 ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿ ಬಾಯಿ ಬಡಿದುಕೊಂಡಿತ್ತು. ದೊಡ್ಡ ಬಾನಗಡಿಯನ್ನೇ ಎಬ್ಬಿಸಿತ್ತು. ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಹೀಗಿದೆ ನೋಡಿ ಕೈ ಕರಾಮತ್ತು. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ ಎಂದು ಹೇಳಿದ್ದಾರೆ.

ಆರಂಭದಲ್ಲಿಯೇ ವಿದ್ಯುತ್ ಶಾಕ್ ಕೊಟ್ಟಿದ್ದ ಸರ್ಕಾರ, ಗೃಹಜ್ಯೋತಿಯನ್ನು ಜನರ ಪಾಲಿಗೆ ಸುಡುಜ್ಯೋತಿ ಮಾಡಿತ್ತು. ಏರಿದ ಬೆಲೆಗಳನ್ನು ಕೆಳಗಿಳಿಸಲು ಕೈಲಾಗದ ಈ ಸರ್ಕಾರ, ವಿಧಾನ ಕಲಾಪ ಮುಗಿಯುತ್ತಿದ್ದಂತೆಯೇ ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆಭಾಗ್ಯವನ್ನು ಕರುಣಿಸಿ ಕೈತೊಳೆದುಕೊಂಡಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿದ್ದವರು ಎರಡೇ ತಿಂಗಳಲ್ಲಿ ಅದನ್ನು ಮರೆತೇ ಹೋಗಿದ್ದಾರೆ!! ಹಸುಗಳ ಹಿಂಡಿ, ಬೂಸಾ ಬೆಲೆ ಇಳಿಕೆಗೂ ಯಾವ ಗ್ಯಾರಂಟಿಯೂ ಇಲ್ಲ. ಇವರಿಗೆ ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ. ಈಗ ಜನರ ಬದುಕೇ ಹಾಲಾಹಲವಾಗಿದೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಕ್ಕೆ ನಮ್ಮ ವಿರೋಧ: ಶಾಸಕ ಶ್ರೀವತ್ಸ
ಮುಂದಿನ ಲೇಖನಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ: ವಿದ್ಯಾರ್ಥಿನಿಯರ ಜತೆ ಬೀಚ್’ಗೆ ತೆರೆಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ