ಮನೆ ರಾಜ್ಯ ಬಿಸಿಲಿನ ಅಬ್ಬರಕ್ಕೆ ತತ್ತರ – ಶ್ವಾನದಳಕ್ಕೆ ಕೂಲರ್ ವ್ಯವಸ್ಥೆ..!

ಬಿಸಿಲಿನ ಅಬ್ಬರಕ್ಕೆ ತತ್ತರ – ಶ್ವಾನದಳಕ್ಕೆ ಕೂಲರ್ ವ್ಯವಸ್ಥೆ..!

0

ರಾಯಚೂರು : ಜಿಲ್ಲೆಯಲ್ಲಿ ಬೇಸಿಗೆಯ ಬಿರು ಬಿಸಿಲಿಗೆ ಮನುಷ್ಯರು ಮಾತ್ರವಲ್ಲದೇ ಪೊಲೀಸ್ ಇಲಾಖೆಯ ಶ್ವಾನದಳ ಸಹ ತತ್ತರಿಸಿದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಶ್ವಾನದಳದ ಐದು ನಾಯಿಗಳಿಗೆ ಪ್ರತ್ಯೇಕ ಕೂಲರ್‌ಗಳ ವ್ಯವಸ್ಥೆ ಮಾಡಿದ್ದಾರೆ.

ಪ್ರತಿನಿತ್ಯ ಅಧಿಕ ತಾಪಮಾನ ದಾಖಲಾಗುತ್ತಿರುವ ಹಿನ್ನೆಲೆ ಶಖೆಯಿಂದ ರಕ್ಷಣೆ ಮಾಡಲು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನಗಳಿಗೆ ಸ್ಪೆಷಲ್ ಕೇರ್ ಮಾಡಲಾಗುತ್ತಿದೆ. ಇಲ್ಲಿನ ಲೂಸಿ, ರೀಟಾ, ಚೆರ್ರಿ, ಡಾರ್ಬಿ, ಸಿರಿ ಹೆಸರಿನ ಶ್ವಾನಗಳು ಕೂಲ್ ಆಗಿರಲು ಕೂಲರ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತ್ಯೇಕ ಕೋಣೆಗಳಲ್ಲಿರುವ ಐದು ಶ್ವಾನಗಳಿಗೆ ಐದು ಕೂಲರ್‌ಗಳ ವ್ಯವಸ್ಥೆ ಮಾಡಿದ್ದಾರೆ. ಎಕ್ಸಪ್ಲೊಸಿವ್ ಡಿಟೆಕ್ಷನ್ ಹಾಗೂ ಕ್ರೈಂ ಡಿಟೆಕ್ಷನ್ ತರಬೇತಿ ಪಡೆದು ಎಕ್ಸಪರ್ಟ್ ಆಗಿರುವ ಶ್ವಾನಗಳಿಗೆ ಬೇಸಿಗೆಗೆ ಅನುಗುಣವಾಗಿ ಆಹಾರ ಪದ್ದತಿಯಲ್ಲೂ ಬದಲಾವಣೆ ಮಾಡಲಾಗಿದೆ.

ಈಗಾಗಲೇ ಹಲವಾರು ಪ್ರಕರಣ ಭೇದಿಸಿರುವ ಶ್ವಾನಪಡೆಗೆ ಬಿಸಿಲಿನಿಂದ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ಒತ್ತು ನೀಡಿದ್ದಾರೆ. ನಿತ್ಯ ದಾಖಲಾಗುತ್ತಿರುವ ಸರಾಸರಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ವಿದೇಶಿ ತಳಿ ಶ್ವಾನಗಳು ತತ್ತರಿಸುತ್ತಿವೆ. ಶ್ವಾನದಳದಲ್ಲಿರುವ ಲ್ಯಾಬ್ರೊಡಾರ್, ರಿಟ್ರೈವರ್, ಡೊಬರ್ಮನ್ ಪಿನ್ಷರ್ ತಳಿಯ ಶ್ವಾನಗಳಿಗೆ ರಾಯಚೂರಿನ ಬಿಸಿಲಿನ ತಾಪ ಕಡಿಮೆ ಮಾಡಲು ಕೂಲರ್‌ಗಳ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.