ಮಂಗಳೂರು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ನಾಲ್ಕು ಜಿಲ್ಲೆಗಳ ಜನರಿಗೆ ದೀರ್ಘಕಾಲದಿಂದ ಕಾಡುತ್ತಿರುವ ನ್ಯಾಯಾಂಗ ಸೇವೆಗಳ ಸವಾಲಿಗೆ ಶೀಘ್ರದಲ್ಲೇ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ ಏನ್ನಲಾಗಿದೆ. ಮಂಗಳೂರಲ್ಲಿ ಹೈಕೋರ್ಟ್ ಸಂಚಾರಿ ಹಾಗೂ ಖಾಯಂ ಪೀಠ ಸ್ಥಾಪನೆಗೆ ಸಂಬಂಧಿಸಿದ ಬೇಡಿಕೆ ಇದೀಗ ಮಹತ್ವದ ಹಂತ ತಲುಪಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ಥಳ ಪರಿಶೀಲನೆಗೆ ಒಪ್ಪಿಗೆ ಸೂಚಿಸಿರುವುದು ಈ ಹೋರಾಟಕ್ಕೆ ಹೊಸ ಬಲ ನೀಡಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಂದ ಪ್ರತಿ ಪ್ರಕರಣಕ್ಕೂ ದೂರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ವಕೀಲರು, ವಾದಿಗಳು ಹಾಗೂ ಸಾಮಾನ್ಯ ಜನರನ್ನು ವರ್ಷಗಳ ಕಾಲ ಸಂಕಷ್ಟಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಹಲವು ವರ್ಷಗಳಿಂದ ವಿವಿಧ ವಲಯಗಳಿಂದ ಒತ್ತಾಯ ವ್ಯಕ್ತವಾಗುತ್ತಿದ್ದು, ಇದೀಗ ಆ ಬೇಡಿಕೆ ಸ್ಪಷ್ಟ ರೂಪ ಪಡೆಯುತ್ತಿರುವುದು ಗಮನಾರ್ಹವಾಗಿದೆ. ಪ್ರಸ್ತುತವಾಗಿ ನಗರದಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡವೇ ಸಂಚಾರಿ ಪೀಠಕ್ಕೆ ತಾತ್ಕಾಲಿಕ ಕೇಂದ್ರವಾಗುವ ಸಾಧ್ಯತೆ ಹೆಚ್ಚಿದೆ. ಸುಮಾರು 5.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಿತ ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಕೋರ್ಟ್ ಹಾಲ್‌ಗಳು, ದಾಖಲೆ ಸಂಗ್ರಹಣಾ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ. ಈ ಕಟ್ಟಡವನ್ನು ನ್ಯಾಯಾಂಗ ಬಳಕೆಗೆ ಮೀಸಲಿಡುವ ಕುರಿತು ಸರ್ಕಾರದ ಮಟ್ಟದಲ್ಲೂ ಚರ್ಚೆಗಳು ಆರಂಭಗೊಂಡಿವೆ .ಇದೇ ವೇಳೆ, ಮಂಗಳೂರಲ್ಲಿ ಇರುವ ವಿಚಾರಣಾಧೀನ ಕೈದಿಗಳ ಜೈಲು ಸ್ಥಳಾಂತರಗೊಂಡ ಬಳಿಕ ಆ ಪ್ರದೇಶವೂ ಭವಿಷ್ಯದಲ್ಲಿ ಖಾಯಂ ಪೀಠಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ ಎನ್ನಬಹುದಾಗಿದೆ.
ಆದರೆ ಆ ಪ್ರಕ್ರಿಯೆಗೆ ಇನ್ನೂ ಎರಡು-ಮೂರು ವರ್ಷಗಳ ಕಾಲ ಹಿಡಿಯುವ ನಿರೀಕ್ಷೆ ಇರುವುದರಿಂದ ತಾತ್ಕಾಲಿಕವಾಗಿ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನೇ ಬಳಕೆ ಮಾಡುವ ಪ್ರಸ್ತಾಪ ಮುಂದಿರಿಸಲಾಗಿದೆ. ಈ ಹೋರಾಟ ಕೇವಲ ರಾಜಕೀಯ ಅಥವಾ ಆಡಳಿತ ಮಟ್ಟದಲ್ಲಿ ಮಾತ್ರ ಸೀಮಿತವಾಗಿರದೇ, ವಕೀಲರ ಸಂಘಗಳು, ಕಾನೂನು ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯಿಂದ ಸಾಗಿರುವುದು ವಿಶೇಷ. ಪೋಸ್ಟ್‌ಕಾರ್ಡ್ ಮತ್ತು ಈಮೇಲ್ ಅಭಿಯಾನಗಳ ಮೂಲಕ ನ್ಯಾಯಾಧೀಶರ ಗಮನ ಸೆಳೆಯುವ ಪ್ರಯತ್ನವೂ ಈ ಚಳವಳಿಗೆ ವಿಭಿನ್ನತೆ ತಂದಿದೆ.
ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರಗಳಲ್ಲಿ ಈಗಾಗಲೇ ಸಂಚಾರಿ ಹೈಕೋರ್ಟ್ ಪೀಠಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯನ್ನು ಮಂಗಳೂರಿನಲ್ಲೂ ಜಾರಿಗೆ ತರುವ ಬೇಡಿಕೆ ಬಲ ಪಡೆದಿದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗದ ಜನರಿಗೆ ನ್ಯಾಯಾಂಗ ಸೇವೆಗಳು ಹತ್ತಿರವಾಗುವ ನಿರೀಕ್ಷೆ ಮೂಡಿದೆ. ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯರು ಮತ್ತು ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕ ಐವನ್ ಡಿಸೋಜ ಅವರು, ಸಾಮಾನ್ಯ ಜನರಿಂದ ಹಿಡಿದು ವಕೀಲರು, ವಿದ್ಯಾರ್ಥಿಗಳು ಮತ್ತು ಜನಪ್ರತಿನಿಧಿಗಳ ಹೋರಾಟದ ಫಲವಾಗಿ ಈ ಹಂತ ತಲುಪಿದ್ದೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸ್ಥಳ ಪರಿಶೀಲನೆ ನಿರ್ಧಾರವು ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ದಾರಿತೋರುತ್ತದೆ ಎಂಬ ವಿಶ್ವಾಸ ಮೂಡಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಬಹುದು.














