ಬೆಂಗಳೂರು : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ಬೆಲೆ ಇಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಮೇ 1 ರಂದು ಬರೋಬ್ಬರಿ 993 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ದರ ಏರಿಕೆಯಿಂದಾಗಿ ಹೋಟೆಲ್ ನಡೆಸುವುದೇ ಅಸಾಧ್ಯವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ, ದರ ಏರಿಸದಿದ್ದರೆ ಮಾಲೀಕರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.
ತಮ್ಮ ಸಮಸ್ಯೆಗಳನ್ನು ವೈಯಕ್ತಿಕವಾಗಿ ಹೇಳಿಕೊಳ್ಳಲು ಪ್ರಧಾನಿಯವರು ಒಂದು ಅವಕಾಶ ನೀಡಬೇಕು ಮತ್ತು ತಕ್ಷಣವೇ ವಾಣಿಜ್ಯ ಗ್ಯಾಸ್ ದರವನ್ನು ಇಳಿಸಿ ಹೋಟೆಲ್ ಉದ್ಯಮವನ್ನು ಉಳಿಸಬೇಕು ಎಂದು ಬೆಂಗಳೂರು ಹೋಟೆಲ್ ಒಕ್ಕೂಟ ಪತ್ರದ ಮೂಲಕ ವಿನಂತಿಸಿದೆ.














