ಮನೆ ಕಾನೂನು ಬಿಡಿಎಯಿಂದ ಈಸ್ಟ್ ಇಂಡಿಯಾ ಕಂಪೆನಿ ಮನಸ್ಥಿತಿ ಪ್ರದರ್ಶನ; ಪ್ರಾಧಿಕಾರಕ್ಕೆ ಹೈಕೋರ್ಟ್ ಛೀಮಾರಿ

ಬಿಡಿಎಯಿಂದ ಈಸ್ಟ್ ಇಂಡಿಯಾ ಕಂಪೆನಿ ಮನಸ್ಥಿತಿ ಪ್ರದರ್ಶನ; ಪ್ರಾಧಿಕಾರಕ್ಕೆ ಹೈಕೋರ್ಟ್ ಛೀಮಾರಿ

0

ಭೂ ಮಾಲೀಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು(ಟಿಡಿಆರ್) ಸರ್ಟಿಫಿಕೇಟ್ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕ್ರಮವನ್ನು ಈಚೆಗೆ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಇದು ಪ್ರಾಧಿಕಾರವು ಇನ್ನೂ ಈಸ್ಟ್ ಇಂಡಿಯಾ ಕಂಪೆನಿಯ ಮನಸ್ಥಿತಿ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಛೀಮಾರಿ ಹಾಕಿದೆ.

ಬೆಂಗಳೂರಿನ ಜಯಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ತಾನು ನೀಡಿದ್ದ ಭರವಸೆಯಂತೆ ಟಿಡಿಆರ್ ನೀಡಲಾಗುವುದಿಲ್ಲ ಎಂದಿದ್ದ ಬಿಡಿಎ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಅರ್ಜಿದಾರರಿಗೆ ಟಿಡಿಆರ್ ಸರ್ಟಿಫಿಕೇಟ್ಗಳನ್ನು ವಿತರಿಸುವಂತೆ ಬಿಡಿಎಗೆ ಆದೇಶ ನೀಡಿರುವ ನ್ಯಾಯಾಲಯವು ಮೂರು ತಿಂಗಳಲ್ಲಿ ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.

ಒಂದು ವೇಳೆ ನ್ಯಾಯಾಲಯ ಆದೇಶ ಪಾಲನೆ ವಿಳಂಬವಾದರೆ ಬಿಡಿಎ ಆಯುಕ್ತರು ಪ್ರತಿದಿನಕ್ಕೆ ಒಂದು ಸಾವಿರ ರೂಪಾಯಿಯಂತೆ ಅರ್ಜಿದಾರರಿಗೆ ದಂಡ ಪಾವತಿಸಬೇಕು. ಆ ದಂಡದ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಯಿಂದ ನಿಯಮದ ಪ್ರಕಾರ ವಸೂಲು ಮಾಡಬೇಕು ಎಂದೂ ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರತಿವಾದಿ ಬಿಡಿಎ ಅರ್ಜಿದಾರರಿಗೆ ಟಿಡಿಆರ್ ಸರ್ಟಿಫಿಕೇಟ್ ನಿರಾಕರಿಸುವುದನ್ನು ಸಮರ್ಥಿಸಿಕೊಂಡಿಲ್ಲ. ಟಿಡಿಆರ್ ನಿರಾಕರಣೆ ವಾಸ್ತವವಾಗಿ ಅರ್ಜಿದಾರರಲ್ಲಿ ಹಣ ನೀಡಿ ಜಾಗದ ಹಕ್ಕು ಪತ್ರ ಪಡೆದಿದ್ದರೂ ಅವರು ಪರಿಹಾರ ಪಾವತಿಗೆ ಅರ್ಹರಲ್ಲ ಎಂದು ಹೇಳಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಒಂದು ವೇಳೆ ಸರ್ಕಾರ ನಿಯಮಗಳನ್ನು ಪಾಲಿಸದೆ ಅಭಿವೃದ್ಧಿ ಯೋಜನೆಗಳಿಗೆ ಖಾಸಗಿ ವ್ಯಕ್ತಿಯ ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಮತ್ತು ಟಿಡಿಆರ್ ಸೌಕರ್ಯ ನಿರಾಕರಿಸಿದರೆ ಅದು ಅವೈಜ್ಞಾನಿಕವಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ಅಲ್ಲದೆ, ಬಿಡಿಎ ಆದೇಶವನ್ನು ಸುಮ್ಮನೆ ಓದಿದರೆ ಅದು ಈಸ್ಟ್ ಇಂಡಿಯಾ ಕಂಪೆನಿಯ ಮನಸ್ಥಿತಿಯನ್ನು ಬಿಂಬಿಸುತ್ತದೆಯೇ ಹೊರತು ಹೃದಯವಂತಿಕೆ ಹೊಂದಿರುವ ಮನಸ್ಥಿತಿಯನ್ನಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಮಾರೇನಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕೆ ಅರ್ಜಿದಾರರ ಭೂಮಿಯನ್ನು ಬಿಡಿಎ ಪಡೆದಿತ್ತು. ಅದಕ್ಕೆ ಪರ್ಯಾಯವಾಗಿ ಟಿಡಿಆರ್ ಸರ್ಟಿಫಿಕೇಟ್ ನೀಡುವುದಾಗಿ ಅರ್ಜಿದಾರರಿಗೆ ಭರವಸೆ ನೀಡಿತ್ತು. ಅದರಂತೆ ಅರ್ಜಿದಾರರು ತಮ್ಮ ಜಾಗವನ್ನು ಬಿಟ್ಟುಕೊಟ್ಟು ನಂತರ ನಿಯಮದಂತೆ ಟಿಡಿಆರ್ ಸರ್ಟಿಫಿಕೇಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ಬಿಡಿಎ ಅರ್ಜಿದಾರರ ಜಾಗದ ದಾಖಲೆಗಳು ಸರಿ ಇಲ್ಲ ಎಂದು ನಿರಾಕರಿಸಿತ್ತು. ಆದರೆ ಅರ್ಜಿದಾರರು ನಿಯಮದಂತೆ ತಮ್ಮ ಬಳಿ ಜಾಗದ ಹಕ್ಕುಪತ್ರ ಇದೆ. ಆದರೂ ಬಿಡಿಎ ಟಿಡಿಆರ್ ಸರ್ಟಿಫಿಕೇಟ್ ನಿರಾಕರಿಸಿರುವುದು ಕಾನೂನು ಬಾಹಿರ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಹಿಂದಿನ ಲೇಖನಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ಹೆದ್ದಾರಿಯಲ್ಲಿ ಟೋಲ್: ಆಕ್ಷೇಪಣೆ ಸಲ್ಲಿಸಲು ಎನ್’ಎಚ್’ಎಐಗೆ ಹೈಕೋರ್ಟ್ ನಿರ್ದೇಶನ
ಮುಂದಿನ ಲೇಖನಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: ಡಿಕೆಶಿ ರಾಜಕಾರಣ ಮಾಡುತ್ತಿದ್ದಾರೆ- ಸಿಎಂ ಬೊಮ್ಮಾಯಿ