ಮನೆ ಸುದ್ದಿ ಜಾಲ ರೋಮಾಂಚಕ ಡರ್ಟ್ ಟ್ರ್ಯಾಕ್ ಬೈಕ್ ರೇಸ್ : ಚಿಕ್ಕಮಗಳೂರು

ರೋಮಾಂಚಕ ಡರ್ಟ್ ಟ್ರ್ಯಾಕ್ ಬೈಕ್ ರೇಸ್ : ಚಿಕ್ಕಮಗಳೂರು

0

ಚಿಕ್ಕಮಗಳೂರು ತಿರುವುಗಳಲ್ಲಿ ಧೂಳೆಬ್ಬಿಸಿಕೊಂಡು ಶರ ವೇಗದಲ್ಲಿ ಮುನ್ನುಗ್ಗುವ ಬೈಕ್ ರೇಸರ್‌ಗಳನ್ನು ನೋಡುವುದೇ ರೋಮಾಂಚಕ ಅನುಭವ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಛತ್ರ ಮೈದಾನದಲ್ಲಿ ಬುಧವಾರ ‘ಡರ್ಟ್ ಟ್ರ್ಯಾಕ್ ಬೈಕ್ ರೇಸ್ 2026’ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಹಲವಾರು ಪ್ರತಿಭಾವಂತ ಬೈಕ್ ರೇಸರ್‌ಗಳು ಪಾಲ್ಗೊಂಡಿದ್ದರು ಎಂಬುದಾಗಿದೆ.

ಸುಮಾರು 900 ಮೀಟರ್ ಉದ್ದದ ಟ್ರ್ಯಾಕ್‌ನಲ್ಲಿ ಆರು ಲ್ಯಾಪ್‌ಗಳನ್ನು ಪೂರ್ಣಗೊಳಿಸುವ ಸ್ಪರ್ಧೆ ಇದಾಗಿತ್ತು. ಕಡಿಮೆ ಸಮಯದಲ್ಲಿ ಗುರಿ ಮುಟ್ಟುವವರು ವಿಜೇತರೆಂಬ ನಿಯಮ ರೂಪಿಸಲಾಗಿತ್ತು. ಬಿಸಿಲಿನ ತಾಪ ಹಾಗೂ ಧೂಳನ್ನು ಲೆಕ್ಕಿಸದೆ ನೂರಾರು ಮಂದಿ ಪ್ರೇಕ್ಷಕರು ಈ ಸ್ಪರ್ಧೆಯನ್ನು ಕಣ್ತುಂಬಿಕೊಂಡರು. ಸ್ಪರ್ಧೆಯ ಪ್ರತಿಯೊಂದು ಟರ್ನಿಂಗ್‌ನಲ್ಲೂ ಬೈಕ್‌ಗಳ ವೇಗ, ಚಾಲಕರ ಕೌಶಲ್ಯ ಮತ್ತು ನಿಯಂತ್ರಣ ಪ್ರೇಕ್ಷಕರನ್ನು ಪುಳಕಗೊಳಿಸಿತು. ಕೆಲವೊಮ್ಮೆ ಬೈಕ್‌ಗಳು ತಿರುಗುವ ವೇಳೆ ಮೇಲೇಳುತ್ತಿದ್ದ ಅಪಾರ ಪ್ರಮಾಣದ ಧೂಳು ಕೆಲವು ಕ್ಷಣಗಳ ಕಾಲ ರೇಸರ್‌ಗಳನ್ನು ಕಾಣದಂತೆ ಮಾಡುತ್ತಿದ್ದರೂ, ಅದೇ ರೋಮಾಂಚನ ಉಂಟುಮಾಡುತ್ತಿತ್ತು. ಡರ್ಟ್ ಟ್ರ್ಯಾಕ್ ಬೈಕ್ ರೇಸ್‌ನಲ್ಲಿ 139ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಎಕ್ಸ್ಪರ್ಟ್ ಕ್ಲಾಸ್, ಕಿಡ್ಸ್ ಕ್ಲಾಸ್, ಇಂಡಿಯನ್ ಓಪನ್ ಕ್ಲಾಸ್, ಕರ್ನಾಟಕ ಓಪನ್, ಬೆಸ್ಟ್ ರೈಡರ್, ಸ್ಟಾರ್ ಆಫ್ ಚಿಕ್ಕಮಗಳೂರು, ಬುಲೆಟ್ ಕ್ಲಾಸ್, ಬಿಗಿನರ್ಸ್, ಟು ಸ್ಟ್ರೋಕ್ ಫೈನಲ್, ಕರ್ನಾಟಕ ಓಪನ್ ಕ್ಲಾಸ್ ಫೈನಲ್, ಫೋರ್ ಸ್ಟ್ರೋಕ್ ಫೈನಲ್, ಮೊಪೆಡ್ ಹೀಗೆ ವಿವಿಧ ರೀತಿಯ 13 ವಿಭಾಗದಲ್ಲಿ ರೇಸ್ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ.

ಈ ಕುರಿತು ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಹಾಗೂ ಟ್ರೋಫಿ ನೀಡಲಾಯಿತು. ಸ್ಪರ್ಧೆಯ ಅಂತ್ಯದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಬಹುಮಾನವಾಗಿ 12,000 ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 8,000 ರೂ. ಮತ್ತು ತೃತೀಯ ಬಹುಮಾನವಾಗಿ 4,000 ರೂ. ನಗದು ಬಹುಮಾನಗಳನ್ನು ಹಂಚಿಕೊಡಲಾಯಿತು. ಆದರೆ ಈ ಬಾರಿ ನಡೆದ ಸ್ಪರ್ಧೆಯಲ್ಲಿ ಚಾಮರಾಜನಗರ ಅರ್ಪಜ್ ಅಹಮದ್ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರೆ, ಚಿಕ್ಕಮಗಳೂರು ಮೂಲದ ನಿಸಾರ್ ದ್ವಿತೀಯ ಸ್ಥಾನ ಪಡೆದರು ಎನ್ನಲಾಗುತ್ತಿದೆ.