ಮನೆ ಸುದ್ದಿ ಜಾಲ ಉಚಿತ ಬಿತ್ತನೆ ಬೀಜಕ್ಕಾಗಿ ಮುಗಿ ಬಿದ್ದ ರೈತರು : ಹಾವೇರಿ

ಉಚಿತ ಬಿತ್ತನೆ ಬೀಜಕ್ಕಾಗಿ ಮುಗಿ ಬಿದ್ದ ರೈತರು : ಹಾವೇರಿ

0

ಹಾವೇರಿ: ನಗರದ ಜಾನುವಾರು ಮಾರುಕಟ್ಟೆಯ ಪ್ರಾಂಗಣದಲ್ಲಿರುವ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘದ ಒಕ್ಕೂಟದ ಗೋದಾಮಿನ ಮುಂದೆ ಮಂಗಳವಾರ ಎಲ್ಲಿ ನೋಡಿದರಲ್ಲಿ ರೈತರೇ ರೈತರು. ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘದ ಒಕ್ಕೂಟ ಪ್ರತಿವರ್ಷ ನಿಗದಿಪಡಿಸಿದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತದೆ. ಅದರಂತೆ ಈ ವರ್ಷ ಸಹ ಸೋಯಾಬಿನ್ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದ್ದು, ಒಕ್ಕೂಟದ ಮುಂದೆ ಸಾವಿರಾರು ರೈತರು ಸೇರಿದ್ದು ಹಾವೇರಿ ತಾಲೂಕಿನ ಸುಮಾರು 1500 ರೈತರಿಗೆ 25 ಕೆಜಿ ಸೋಯಾಬಿನ್ ಬಿತ್ತನೆ ಬೀಜ ವಿತರಣೆಗೆ ಒಕ್ಕೂಟ ಮುಂದಾಗಿತ್ತು. ಇದಕ್ಕಾಗಿ ರೈತರಿಂದ ಅರ್ಜಿ ಅಹ್ವಾನಿಸಿತ್ತು ಎನ್ನಲಾಗುತ್ತಿದೆ.

ರೈತರು ಉಚಿತ ಬಿತ್ತನೆ ಬೀಜ ಪಡೆಯಲು ಒಕ್ಕೂಟ ಹಲವಾರ ದಾಖಲೆಗಳನ್ನು ತರುವಂತೆ ತಿಳಿಸಿತ್ತು. ಅದರಂತೆ ರೈತರು ಜಮೀನು ದಾಖಲೆ, ಆಧಾರ ಕಾರ್ಡ್ ಕೊಟ್ಟು ಅರ್ಜಿ ಸಹ ಸಲ್ಲಿಸಿದ್ದರು. ಆದರೆ, ಎರಡ್ಮೂರು ದಿನ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಿಸಿದ ಒಕ್ಕೂಟ ನಂತರ ಗೋದಾಮಿಗೆ ಬೀಗ ಹಾಕಿಕೊಂಡು ಹೋಗಿತ್ತು. ಅರ್ಜಿ ಕೊಟ್ಟ ರೈತರಿಗೆಲ್ಲ ಉಚಿತವಾಗಿ ಬಿತ್ತನೆ ಬೀಜ ಕೊಡೋವಷ್ಟು ಪ್ರಯೋಗಾರ್ಥಕ ಬಿತ್ತನೆ ಬೀಜ ಅವರ ಬಳಿ ಇರದ ಕಾರಣ ಸಿಬ್ಬಂದಿ ಗೋದಾಮಿನ ಬೀಗ ಹಾಕಿಕೊಂಡು ಹೋಗಿದ್ದರು. ಮಂಗಳವಾರ ಬಿತ್ತನೆ ಬೀಜ ಪಡೆಯಲು ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ಗೋದಾಮಿಗೆ ಆಗಮಿಸಿದ್ದ ರೈತರಿಗೆ ನಿರಾಶೆ ಕಾದಿತ್ತು. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಗೋದಾಮಿಗೆ ಆಗಮಿಸಿ ರೈತರ ನಿಯಂತ್ರಿಸಿದರು. ಒಕ್ಕೂಟದ ಸಿಬ್ಬಂದಿ ರೈತರಿಗೆ ಪರೀಕ್ಷಾರ್ಥಕ ಬಿತ್ತನೆ ಬೀಜಗಳನ್ನು ವಿತರಿಸಲು ರೈತರಿಂದ ದಾಖಲಾತಿ ಪಡೆದಿದೆ. ಆದರೆ ಪಡೆದ ದಾಖಲಾತಿಗಳಲ್ಲಿ 1500 ರೈತರನ್ನು ಮಾತ್ರ ಆಯ್ಕೆ ಮಾಡಬೇಕಾಗಿತ್ತು. ಆದರೆ, ರೈತರಿಗೆ ಅರ್ಜಿ ಹಾಕಿದವರಿಗೆಲ್ಲ ಉಚಿತ ಬಿತ್ತನೆ ಬೀಜ ನೀಡಲಾಗುತ್ತದೆ ಎನ್ನಲಾಗಿದೆ. ಪರಿಣಾಮ ಅರ್ಜಿ ಹಾಕಿದ ರೈತರೆಲ್ಲ ಮಂಗಳವಾರ ಒಕ್ಕೂಟದ ಗೋದಾಮಿಗೆ ಆಗಮಿಸಿದ್ದರು. ರೈತರು ನಮಗೂ ಬಿತ್ತನೆ ಬೀಜ ಕೊಡಿ ಎಂದು ಬಂದಿದ್ದರು‌.

ಆದರೆ, ರೈತರ ಸಂಖ್ಯೆ ನೋಡಿ ಒಕ್ಕೂಟದವರು ಗೋದಾಮು ಬಾಗಿಲು ಹಾಕಿಕೊಂಡು ಹೋಗಿದ್ದರು ಇದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಬಿತ್ತನೆ ಬೀಜ ಕೊಡದೇ ಗೋದಾಮು ಬಾಗಿಲು ಹಾಕಿದ್ದಕ್ಕೆ ಆಕ್ರೋಶಗೊಂಡ ರೈತರು ರಸ್ತೆಗಿಳಿದು ಪ್ರತಿಭಟನೆಗೆ ಸಜ್ಜಾಗಿದ್ದರು. ಗೋದಾಮು ಬಾಗಿಲು ತೆರೆಸಿ ಗೋದಾಮಿನಲ್ಲಿ ಬೀಜ ಎಷ್ಟಿದೆ ಅಷ್ಟು ರೈತರಿಗೆ ಕೊಡಬೇಕು ಎಂದು ರೈತರು ಪಟ್ಟುಹಿಡಿದರು. ಬಿತ್ತನೆ ಬೀಜ ಕೊಡದಿದ್ದರೆ ನಮ್ಮ ಆಧಾರ್​ ಕಾರ್ಡ್, ಜಮೀನಿನ ದಾಖಲೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದು ಕುಳಿತರು. ರೈತರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಒಕ್ಕೂಟದ ಅಧಿಕಾರಿಗಳನ್ನು ಕರೆಸಿ ಗೋದಾಮಿನ ಬಾಗಿಲು ತೆರೆಸಿದರು. ನಂತರ ಗೋದಾಮಿನಲ್ಲಿದ್ದ ಬಿತ್ತನೆ ಬೀಜ ರೈತರಿಗೆ ವಿತರಣೆ ಮಾಡಿದರು. ಒಟ್ಟು ಒಂದೂವರೆ ಸಾವಿರ ಬ್ಯಾಗ್ ಬಿತ್ತನೆ ಬೀಜ ಬಂದಿತ್ತು. ಅದರಲ್ಲಿ ಈಗಾಗಲೇ 709 ಬ್ಯಾಗ್ ವಿತರಣೆ ಮಾಡಲಾಗಿತ್ತು. ಗೋದಾಮಿನಲ್ಲಿ 450 ಬ್ಯಾಗ್ ಬಿತ್ತನೆ ಬೀಜ ಉಳಿದಿತ್ತು. ನಂತರ ರೈತರು ಪಟ್ಟು ಹಿಡಿದು ಕುಳಿತ ಮೇಲೆ ಗೋದಾಮಿನಲ್ಲಿ ಬಾಗಿಲು ತೆಗೆದು ಅರ್ಜಿ ಸಲ್ಲಿಸಿದ ರೈತರಿಗೆ ಪರೀಕ್ಷಾರ್ಥ ಬಿತ್ತನೆ ಬೀಜ ವಿತರಿಸಲಾಯಿತು. ಒಂದು ಗ್ರಾಮದಲ್ಲಿ 50 ರಿಂದ 100 ಎಕರೆ ಪರೀಕ್ಷೆ ಮಾಡಬೇಕು. ಆದರೆ, ಕೆಲವು ರೈತರಿಗೆ ಬೀಜ ವಿತರಣೆ ಮಾಡಲಾಗಿತ್ತು. ಅದಾದ ಮೇಲೆ ಒಬ್ಬರಿಂದ ಒಬ್ಬರಿಗೆ ವಿಷಯ ಹರಡಿ ಈ ಸಮಸ್ಯೆ ಎದುರಾಗಿದೆ ಎಂದು ಒಕ್ಕೂಟದ ಅಧಿಕಾರಿಗಳು ತಿಳಿಸಿದರು.