ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪುರ ಗ್ರಾಮದಲ್ಲಿನ ಜನರು ಸೇತುವೆ ಕುಸಿಯುವ ಭೀತಿಯಲ್ಲಿದ್ದಾರೆ. ಒಂದು ವೇಳೆ ಸೇತುವೆ ಕುಸಿದರೆ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಡಿತ ಆಗಲಿದೆ. ಇದೀಗ ಶಾಲಾ ಮಕ್ಕಳು, ರೈತರು ಜೀವ ಕೈಯಲ್ಲಿಯೇ ಹಿಡಿದು ಸಂಚರಿಸುವಂತಾಗಿದೆ. ಬಸವಾಪುರ ಗ್ರಾಮದ ಕೂಗಳತೆ ದೂರದಲ್ಲಿ ಭದ್ರಾನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸಂಪರ್ಕ ಸೇತುವೆಯು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಹಾಗೂ ವಾಹನ ಸವಾರರು ಭಯಭೀತರಾಗಿದ್ದಾರೆ. 35 ವರ್ಷಗಳ ಕಾಲದ ಈ ಹಳೆಯ ಸೇತುವೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತೆರವು ಮಾಡಿ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಚನ್ನಗಿರಿ ತಾಲೂಕಿನ ಗುರುರಾಜಪುರ, ದೇಗರದಳ್ಳಿ, ಲಕ್ಷ್ಮಯ್ಯ ಕ್ಯಾಂಪ್ ಸೇರಿದಂತೆ ಬಸವಾಪುರ ಗ್ರಾಮಗಳ ಜನರ ಸುಗಮ ಸಂಚಾರಕ್ಕಾಗಿ ವಿಶೇಷ ಅನುದಾನದಡಿ 1991ರಲ್ಲಿ ಭದ್ರ ನಾಲೆಗೆ ಅಡ್ಡಲಾಗಿ ಈ ಸೇತುವೆಯನ್ನು ಕಟ್ಟಲಾಗಿತ್ತು. ಕಳೆದ ಮೂರು ದಶಕಗಳಿಂದ ಉತ್ತಮ ಸ್ಥಿತಿಯಲ್ಲಿದ್ದ ಈ ಸೇತುವೆಯ ಪಿಲ್ಲರ್ ಹಾಗೂ ತಳಭಾಗ ಕಳೆದ ಎರಡು ದಿನಗಳಿಂದ ಕುಸಿಯಲು ಆರಂಭಿಸಿದೆ. ಈ ಸೇತುವೆ ಯಾವುದೇ ಕ್ಷಣದಲ್ಲಾದರೂ ಸಂಪೂರ್ಣ ನೆಲಸಮವಾಗುವ ಸಾಧ್ಯತೆ ದಟ್ಟವಾಗಿದೆ. ನೂರಾರು ರೈತ ಕುಟುಂಬಗಳು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ನಿತ್ಯವೂ ಈ ಸೇತುವೆಯನ್ನೇ ನಂಬಿ ಜನ ಜೀವನ ನಡೆಸುತ್ತಿದ್ದಾರೆ. ಇದಲ್ಲದೆ ಸ್ಥಳೀಯರು ದಿಢೀರ್ ಆಸ್ಪತ್ರೆ, ಶಾಲೆ-ಕಾಲೇಜಿಗೆ ತೆರಳುವ ಪ್ರಮುಖ ಸೇತುವೆಯಾಗಿದೆ. ಈ ನಾಲ್ಕು ಹಳ್ಳಿಗಳ ಜನರ ವ್ಯಾಪಾರ ಹಾಗೂ ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಚನ್ನಗಿರಿ ಇಲ್ಲವೇ, ಶಿವಮೊಗ್ಗ ನಗರಕ್ಕೆ ಹೋಗಬೇಕಾದರೆ ಈ ಸೇತುವೆಯೇ ಆಸರೆಯಾಗಿದೆ. ಒಂದು ವೇಳೆ ಈ ಸೇತುವೆ ಸಂಪೂರ್ಣವಾಗಿ ಕುಸಿದರೆ ಗ್ರಾಮಸ್ಥರು ದೂರದ ಸಿದ್ದಾಪುರ ಅಥವಾ ಗುರುರಾಜಪುರ ಗ್ರಾಮದ ಮಾರ್ಗವಾಗಿ ಬರೋಬ್ಬರಿ 3 ಕಿಮೀ ದೂರ ಸಂಚರಿಸಬೇಕಾಗುತ್ತದೆ.
ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಸ್ಥಳೀಯರು ದೂರು ನೀಡಿದ್ದಾರೆ. ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳ ಪರಿಶೀಲನೆಗೆ ಯಾರೊಬ್ಬರೂ ಬಾರದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ರೈತಮುಖಂಡ, ಸಾಮಾಜಿಕ ಹೋರಾಟಗಾರ ರಂಗನಾಥ್ ಅವರು ಮಾತನಾಡಿದ್ದು,’ಚನ್ನಗಿರಿ ತಾಲೂಕಿನ ಬಸವಾಪುರಲ್ಲಿನ ಭದ್ರಾ ನಾಲೆಗೆ 35 ವರ್ಷಗಳ ಹಿಂದೆ ಕಟ್ಟಿದ್ದ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಇದು ಸೋಮವಾರದಿಂದ ಕುಸಿಯುತ್ತಿದೆ. ಹೀಗಾಗಿ, ಜನರು ಹಾಗೂ ವಾಹನ ಸಂಚಾರ ನಿಲ್ಲಿಸಲಾಗಿದೆ’ ಎಂದಿದ್ದಾರೆ. ‘ಈ ನಾಲೆಯ ಮೇಲಿನ ಭಾಗದಲ್ಲಿ 150 ಕುಟುಂಬಗಳು ಹಾಗೂ ನಾಲೆಯ ಕೆಳಭಾಗದಲ್ಲಿ 200 ಕುಟುಂಬಗಳು ವಾಸ ಮಾಡ್ತಿವೆ. ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಭೀತಿಯಿಂದ ತೆರಳುವಂತೆ ಆಗಿದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳು ಭಯದಿಂದ ಸಂಚರಿಸುವಂತಾಗಿದೆ. ಸೇತುವೆ ಕುಸಿದ್ರೆ 2-3 ಕಿಮೀ ದೂರದ ಸಿದ್ದಾಪುರದ ಮೂಲಕ ಸಂಚರಿಸಬೇಕಾಗುತ್ತದೆ. ಈ ಸೇತುವೆ ಕುಸಿಯುವ ಮುನ್ನ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದೆ’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
















