ನವದೆಹಲಿ: ಆಗ್ನೇಯ ದೆಹಲಿಯ ಗೋವಿಂದಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ (ಬುಧವಾರ) ತಡರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿ ತಾಯಿ ಮತ್ತು ಮಗನನ್ನು ಹರಿತವಾದ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಮನೆಯನ್ನು ಲೂಟಿ ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತರನ್ನು 40 ವರ್ಷದ ಶಾರದಾ ಮತ್ತು ಅವರ 14 ವರ್ಷದ ಮಗ ಖುಶಾಲಿ ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಮಾರುಕಟ್ಟೆಯಿಂದ ಹಿಂತಿರುಗಿ ಬಂದಾಗ ಅವರ ಪತ್ನಿ ಮತ್ತು ಮಗ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಗೋವಿಂದಪುರಿಯ ಬೀದಿ ಸಂಖ್ಯೆ 10ರಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ ರಾತ್ರಿ 12:30ರ ಸುಮಾರಿಗೆ ಯಾರೂ ಇಲ್ಲದ್ದನ್ನು ಗಮನಿಸಿದ್ದ ದುಷ್ಕರ್ಮಿಗಳು, ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಂದು, ತಿಜೋರಿಯಿಂದ 10 ರಿಂದ 12 ಲಕ್ಷ ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣಗಳ ಜೊತೆ ಪರಾರಿಯಾಗಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬರುತ್ತಿದೆ. ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಮೃತ ಮಹಿಳೆಯ ಪತಿ ತರಕಾರಿ ವ್ಯಾಪಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಒಂದು ಅಂಗಡಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುಟುಂಬವು ಮೂಲತಃ ಉತ್ತರ ಪ್ರದೇಶದ ಬದೌನ್ ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಗೋವಿಂದಪುರಿಯಲ್ಲಿ ವಾಸಿಸುತ್ತಿದೆ. ಮೃತರ ಪತಿ ಪ್ರತಿದಿನ ಸಂಜೆ ಮಾರುಕಟ್ಟೆಗೆ ಹೋಗಿ ಮಧ್ಯರಾತ್ರಿಯ ವೇಳೆಗೆ ಮನೆಗೆ ಮರಳುತ್ತಾರೆ. ಬುಧವಾರ ತಡರಾತ್ರಿ ಮನೆಗೆ ಬಂದಾಗ, ಆ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಅವರ ಪತ್ನಿ ಮತ್ತು ಮಗ ಅಡುಗೆಮನೆಯಲ್ಲಿ ಕತ್ತು ಸೀಳಿ ಮೃತಪಟ್ಟಿರುವುದು ಕಂಡುಬಂದಿದೆ. ಆರೋಪಿಗಳು ತಿಜೋರಿಯಲ್ಲಿದ್ದ ಆಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಮೃತರ ಸಂಬಂಧಿ ಸುರೇಶ್ ನೋವು ತೋಡಿಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

















