ಮನೆ ರಾಜ್ಯ ಬನ್ನೇರುಘಟ್ಟ ಉದ್ಯಾನವನ ಹೆಣ್ಣು ಜಿರಾಫೆ ಸಾವು – ಅನಾರೋಗ್ಯದಿಂದ ಮೃತಪಟ್ಟ ‘ಶಿವಾನಿ’

ಬನ್ನೇರುಘಟ್ಟ ಉದ್ಯಾನವನ ಹೆಣ್ಣು ಜಿರಾಫೆ ಸಾವು – ಅನಾರೋಗ್ಯದಿಂದ ಮೃತಪಟ್ಟ ‘ಶಿವಾನಿ’

0

ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಜನಪ್ರಿಯ ಜಿರಾಫೆ ‘ಶಿವಾನಿ’ ಅನಾರೋಗ್ಯದಿಂದ ಮೃತಪಟ್ಟಿದೆ. 3 ವರ್ಷ 10 ತಿಂಗಳ ಶಿವಾನಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಕೊನೆಯುಸಿರೆಳೆದಿದೆ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ತಿಳಿದುಬಂದಿದೆ. ಮೈಸೂರಿನಿಂದ ತರಲಾಗಿದ್ದ ಶಿವಾನಿ, ಬನ್ನೇರುಘಟ್ಟದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಈ ದುರಂತ ಮೃಗಾಲಯದ ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ಆಘಾತ ತಂದಿದೆ.

ಜಿರಾಫೆ ‘ಶಿವಾನಿ’ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಜಿರಾಫೆಗೆ ಹಲವು ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬಿಬಿಪಿ ಅಧಿಕಾರಿಗಳ ಪ್ರಕಾರ, ಮೇ 3ರಿಂದ ಆಹಾರ ಸೇವನೆ ನಿಲ್ಲಿಸಿದ್ದ ಜಿರಾಫೆಯನ್ನು ಪಶುವೈದ್ಯರ ತಂಡ ನಿಗಾದಲ್ಲಿಟ್ಟು ಚಿಕಿತ್ಸೆ ನೀಡುತ್ತಿತ್ತು. ಆದರೆ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಮೃತಪಟ್ಟಿದೆ.

ಪೋಸ್ಟ್‌ಮಾರ್ಟಂ ವರದಿಯಲ್ಲಿ ‘ಸಿಕಲ್ ಟಾರ್ಷನ್’ ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಶಿವಾನಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಶಿವಾನಿಯ ದೇಹದ ಮಾದರಿಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತ್ ಮತ್ತು ಬಬ್ಲಿ ಜಿರಾಫೆಗಳಿಗೆ 2022ರಲ್ಲಿ ಶಿವಾನಿ ಜನಿಸಿತ್ತು. ಬನ್ನೇರುಘಟ್ಟದಲ್ಲಿದ್ದ ಏಕೈಕ ಜಿರಾಫೆ ‘ಗೌರಿ’ಗೆ ಸಂಗಾತಿ ಕಲ್ಪಿಸುವ ಉದ್ದೇಶದಿಂದ ಹಲವು ತಿಂಗಳ ಮಾತುಕತೆ ಬಳಿಕ 2024ರಲ್ಲಿ ಶಿವಾನಿಯನ್ನು ವಿಶೇಷ ವಿನ್ಯಾಸದ ಪಂಜರ ಹೊಂದಿದ್ದ ಮಲ್ಟಿ-ಆಕ್ಸಲ್ ಲಾರಿಯಲ್ಲಿ ಭದ್ರತಾ ವ್ಯವಸ್ಥೆಯೊಂದಿಗೆ ಬನ್ನೇರುಘಟ್ಟಕ್ಕೆ ತರಲಾಗಿತ್ತು.