ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನ ಎನ್. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಾಳದಹಾಡಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಮಾಡಲು ಆಗ್ರಹಿಸಿ ಎನ್. ಬೇಗೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಮತ್ತು ಹಾಡಿಯ ಮಹಿಳೆಯರು ಪ್ರತಿಭಟನೆ ನಡೆಸಿದರು. ಮಾಳದ ಹಾಡಿ ಭಾಗ್ಯಾ ಮಾತನಾಡಿ, ‘ಮೂರು ತಿಂಗಳಿಂದಲೂ ಪದೇ ಪದೇ ಕುಡಿಯುವ ನೀರಿನ ಸಮಸ್ಯೆಯಾಗುತ್ತಿತ್ತು.
ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗಿ ಬರುವ ನಮ್ಮಂಥ ಬಡ ಆದಿವಾಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನೂ ಮಾಡದಿದ್ದರೆ ಬಹಳ ತೊಂದರೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಪ್ರತಿದಿನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆ ಮಾಡಿ ಕೇಳುವವರೆಗೂ ಅಧಿಕಾರಿಗಳು ಗಮನ ಹರಿಸದಿದ್ದುದರಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ಮುಖಂಡ ಸುನಿಲ್ ಮಾತನಾಡಿ, ಕಬಿನಿ ಹಿನ್ನೀರಿನ ಪ್ರದೇಶವಾದ ಎನ್. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳದ ಹಾಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ. ಕೂಡಲೇ ಕೈಪಂಪ್, ಮೋಟಾರನ್ನು ದುರಸ್ತಿ ಮಾಡಿ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.
ಆದರಿಂದ ರಸ್ತೆ, ಚರಂಡಿ ವ್ಯವಸ್ಥೆಯನ್ನು ಮಾಡಬೇಕು ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಪರಾಜು ಮನವಿ ಸ್ವೀಕರಿಸಿ ಮಾತನಾಡಿ, ಇಂದೇ ಬೋರ್ವೆಲ್ -ಕೈಪಂಪ್ ದುರಸ್ತಿ ಮಾಡಿಸಲಾಗುವುದು, ಮೋಟಾರ್ ದುರಸ್ತಿಗೆ ಕೆಲಸ ನಡೆಯುತ್ತಿದೆ. ನಾಳೆಯೊಳಗೆ ನೀರು ಪೂರೈಕೆಯಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕೈಗೊಳ್ಳಲಾಗುವುದು ಎಂದರು. ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ಟಿ.ಆರ್. ಸುನಿಲ್, ಮಾಳದ ಹಾಡಿಯ ನಾಗಮ್ಮ ಬಸಮ್ಮ, ಜ್ಯೋತಿ, ಭಾಗ್ಯ, ಗಂಗೆ, ನವೀನ್ ಇದ್ದರು ಎಂದು ತಿಳಿದುಬಂದಿದೆ.

















