ಮನೆ ಕಾನೂನು ಪುಂಡ ಪೋಕರಿ ಎಂದು ಬೈಯ್ದಾತನ ವಿರುದ್ಧದ ಎಫ್ಐಆರ್ ರದ್ದು ಇಲ್ಲ: ಹೈಕೋರ್ಟ್

ಪುಂಡ ಪೋಕರಿ ಎಂದು ಬೈಯ್ದಾತನ ವಿರುದ್ಧದ ಎಫ್ಐಆರ್ ರದ್ದು ಇಲ್ಲ: ಹೈಕೋರ್ಟ್

0

ಬೆಂಗಳೂರು(Bengaluru): ಪತಿಯನ್ನು ‘ಪುಂಡ ಪೋಕರಿ’ ಎಂದು ಕರೆದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸಿದ್ದ ವ್ಯಕ್ತಿಯ ವಿರುದ್ಧದ ಎಫ್‌ಐಆರ್ ರದ್ದುಪಡಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಶ್ರೀನಿವಾಸರಾಜು ಎಂಬುವರು ತಮ್ಮ ವಿರುದ್ಧ ಯಲಹಂಕ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.

ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಅಲ್ಲದೆ, ‘ಪುಂಡ ಪೋಕರಿ’ ಎಂದು ಕರೆದರೆ ಅದು ಆತ್ಮಹತ್ಯೆ ಪ್ರಚೋದನೆಯಾಗುವುದಿಲ್ಲ ಎಂಬ ಅರ್ಜಿದಾರರ ವಾದ ಸರಾಸಗಟಾಗಿ ತಳ್ಳಿಹಾಕಿದೆ.

“ಶಬ್ದಗಳ ಗ್ರಹಿಕೆ ಒಬ್ಬ ವ್ಯಕ್ತಿಗಿಂತ ವ್ಯಕ್ತಿಯ ನಡುವೆ ವಿಭಿನ್ನವಾಗಿರುತ್ತದೆ. ಕೆಲವರು ಬೈಗುಳಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಕೆಲವು ಸೂಕ್ಷ್ಮ ಮನಸ್ಸಿನವರು ಅದನ್ನೇ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬಹುದು. ಆದ್ದರಿಂದ, ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ದೂರುದಾರರನ್ನು ಪುಂಡ ಪೋಕರಿ ಎಂದು ಶ್ರೀನಿವಾಸ ರಾಜು ಕರೆದಿರುವ ವಿಚಾರವನ್ನು ಅವರ ಪರ ವಕೀಲರೆ ಒಪ್ಪಿಕೊಂಡು, ಅದು ಪ್ರಚೋದನೆಯಾಗುವುದಿಲ್ಲವೆಂದು ವಾದಿಸುತ್ತಿದ್ದಾರೆ. ಆದರೆ, ಬೈಗುಳ ಶಬ್ದವನ್ನು ಯಾರು, ಹೇಗೆ ಸ್ವೀಕರಿಸುತ್ತಾರೆಂಬುದರ ಮೇಲೆ ಆಧರಿಸುತ್ತದೆ ಎಂದು ಹೇಳಿದೆ. ಅಲ್ಲದೆ, ಈ ಹಂತದಲ್ಲಿ ಆರೋಪಿ ಬಳಸಿರುವ ಶಬ್ದವು ದೂರುದಾರರ ಮಾನಹಾನಿ ಮಾಡಿದೆ ಎಂಬುದಾಗಿ ತೀರ್ಮಾನಿಸಲು ಸಾಧ್ಯವಾಗುವುದಿಲ್ಲ. ಅಧೀನ ಕೋರ್ಟ್ ನಲ್ಲಿಯೇ ವಿಚಾರಣೆಯಲ್ಲಿಯೇ ಇದು ನಿರ್ಧಾರವಾಗಬೇಕಿದೆ. ಆದ್ದರಿಂದ ಪುಂಡ ಪೋಕರಿ ಎಂಬ ಶಬ್ದವು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 500 (ಮಾನ ಹಾನಿ) ಅನ್ವಯಿಸುವುದಿಲ್ಲ ಎಂಬ ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಂಗ ಬಡಾವಣೆ ನಿವಾಸಿ ಎಚ್.ಎಂ. ವೆಂಕಟೇಶ್, ಕೊಡಿಗೆಹಳ್ಳಿ ಸರ್ವೇ ನಂ 101/2ರಲ್ಲಿ ಸರ್ಕಾರಿ ಜಮೀನನ್ನು ವಿ.ಶ್ರೀನಿವಾಸರಾಜು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ 2012ರಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶ್ರಿನಿವಾಸರಾಜು ಅವರು, ವೆಂಕಟೇಶ್ ಪತ್ನಿ ಸುಮನಾಗೆ ಪದೇ ಪದೇ ದೂರವಾಣಿ ಕರೆ ಮಾಡಿ ಹೆದರಿಸುತ್ತಿದ್ದರು. ಹಾಗಾಗಿ ಖಿನ್ನತೆಗೆ ಒಳಗಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ಸುಮನಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಂತರ ಶ್ರೀನಿವಾಸ ರಾಜು ಅವರು, ವೆಂಕಟೇಶ್ ಅವರನ್ನು ‘ಪುಂಡ ಪೋಕರಿ’ ಎಂದು ಜರಿದಿದ್ದರು. ಮನನೊಂದ ಸುಮನಾ 2012ರ ಆ.16ರಂದು ನೇಣು ಹಾಕಿಕೊಂಡಿದ್ದರು. ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಶ್ರೀನಿವಾಸರಾಜು ಕಾರಣವಾಗಿದ್ದಾರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಯಲಹಂಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅವರು ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ಅದನ್ನು ರದ್ದು ಕೋರಿ ಶ್ರೀನಿವಾಸ ರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹಿಂದಿನ ಲೇಖನಪಿಎಸ್ ಐ ಅಕ್ರಮ ನೇಮಕಾತಿ: ಮತ್ತೋರ್ವ ಆರೋಪಿ ಬಂಧನ
ಮುಂದಿನ ಲೇಖನಅಪ್ರಾಪ್ತನಿಂದ ವಾಹನ ಚಾಲನೆ: ಪೋಷಕರಿಗೆ 20 ಸಾವಿರ ರೂ. ದಂಡ