ಮನೆ ಕಾನೂನು ಮನರಂಜನೆ, ವೈಯಕ್ತಿಕ ಉದ್ದೇಶಕ್ಕೆ ವಾರದಲ್ಲಿ ಒಂದು ದಿನ ಲಘು ವಿಮಾನ ಹಾರಾಟ ನಡೆಸಲು ಹೈಕೋರ್ಟ್‌ ಅನುಮತಿ

ಮನರಂಜನೆ, ವೈಯಕ್ತಿಕ ಉದ್ದೇಶಕ್ಕೆ ವಾರದಲ್ಲಿ ಒಂದು ದಿನ ಲಘು ವಿಮಾನ ಹಾರಾಟ ನಡೆಸಲು ಹೈಕೋರ್ಟ್‌ ಅನುಮತಿ

0

ಮನರಂಜನೆ ಮತ್ತು ವೈಯಕ್ತಿಕ ಉದ್ದೇಶಕ್ಕೆ ವಾರದಲ್ಲಿ ಒಂದು ದಿನ ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಲಘು ವಿಮಾನದಲ್ಲಿ (ಮೈಕ್ರೊ ಲೈಟ್‌ ಏರ್‌ಕ್ರಾಫ್ಟ್‌) ಓಡಾಡಲು ಈಚೆಗೆ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ (ಮುತ್ತಣ್ಣ ಮಾಪನಗಡ ಮತ್ತು ಇನ್ನೊಬ್ಬರು ವರ್ಸಸ್ಕರ್ನಾಟಕ ರಾಜ್ಯ).

ಆಕ್ಷೇಪಿತ ಪ್ರದೇಶವು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಒಳಪಡಲಿದ್ದು, ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಲಘು ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಕಲ್ಲಹಳ್ಳ ವಲಯ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದರು. ಇದನ್ನು ವಜಾ ಮಾಡುವಂತೆ ಕೋರಿ ಕೊಡಗಿನ ಮುತ್ತಣ್ಣ ಮಾಪನಗಡ ಮತ್ತು ಕೂಡಿಮಡ ಸೋಮಣ್ಣ ಸುಬ್ಬಯ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ಅವಸ್ಥಿ ಮತ್ತು ಎಸ್ಆರ್ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಎರಡು ತಿಂಗಳಲ್ಲಿ ಈ ಸಂಬಂಧ ಆದೇಶ ಹೊರಡಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಸೂಚಿಸಿದ್ದು ಮನವಿ ಇತ್ಯರ್ಥಪಡಿಸಿದೆ.

2018 ಡಿಸೆಂಬರ್‌ 28ರಂದು ಡಿಜಿಸಿಎಯು ಅರ್ಜಿದಾರರಿಗೆ ಲಘು ವಿಮಾನ ಹಾರಾಟಕ್ಕೆ ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಿತ ಪ್ರದೇಶವು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಒಳಪಡಲಿದ್ದು, ಪರಿಸರ ಸೂಕ್ಷ್ಮ ಪ್ರದೇಶವಾಗಿದೆ ಎಂಬುದರ ಕುರಿತು ರಾಜ್ಯ ಸರ್ಕಾರವು 15 ದಿನಗಳ ಒಳಗೆ ಡಿಜಿಸಿಎಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿದೆ.

ರಾಜ್ಯ ಸರ್ಕಾರದ ಆಕ್ಷೇಪಣೆಯ ಅನ್ವಯ ಅರ್ಜಿದಾರರಿಗೆ ನಾಗರಿಕ ವಿಮಾನಯಾನ ಅನುಮತಿಸಿರುವ ಅಗತ್ಯತೆಗಳನ್ನು ಡಿಜಿಸಿಎ ಪರಿಶೀಲಿಸಿ, ಕಾನೂನು ಪ್ರಕಾರ ಅರ್ಜಿದಾರರ ವಾದವನ್ನು ಆಲಿಸಿ ಎರಡು ತಿಂಗಳ ಒಳಗೆ ಸೂಕ್ತ ಆದೇಶ ಹೊರಡಿಸಬೇಕು. ಈ ಆದೇಶವನ್ನು ಗೃಹ ಇಲಾಖೆಗೂ ಕಳುಹಿಸಿಬೇಕು. ವಲಯ ಅರಣ್ಯಾಧಿಕಾರಿ ಹೊರಡಿಸಿರುವ ಆಕ್ಷೇಪಿತ ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಹೆಚ್ಚುವರಿ ಮನವಿ ಮತ್ತು ಸಂಬಂಧಿತ ದಾಖಲೆಗಳನ್ನು ಡಿಜಿಸಿಎಗೆ ಸಲ್ಲಿಸಬಹುದಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್ಹುಯಿಲಗೋಳ ಮತ್ತು ವಕೀಲ ಅರ್ಣವ್ಬಾಗಲವಾಡಿ ಅವರು “ವೈಯಕ್ತಿಕ ಮತ್ತು ಮನರಂಜನಾ ದೃಷ್ಟಿಯಿಂದ ಮಾತ್ರ ಲಘು ವಿಮಾನ ಹಾರಾಟ ನಡೆಸಲಾಗುತ್ತಿದೆಯೇ ವಿನಾ ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಮಾಡಲಾಗುತ್ತಿಲ್ಲ. ಹೀಗಾಗಿ, ಪ್ರತಿವಾದಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಾಗದು. ವಲಯ ಅರಣ್ಯಾಧಿಕಾರಿ ನೋಟಿಸ್‌ ಸ್ವೇಚ್ಛೆಯಿಂದ ಕೂಡಿದ್ದು, ಕಾನೂನುಬಾಹಿರವಾಗಿದೆ” ಎಂದಿದ್ದರು.

“2018ರ ಜುಲೈ 25ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದ್ದು, ಅದು ಎರಡು ವರ್ಷಗಳಿಗೆ ಮಾತ್ರ ಸಿಂಧುವಾಗಿತ್ತು. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಪ್ರತಿವಾದಿಗಳು ಮನರಂಜನೆ ಮತ್ತು ವೈಯಕ್ತಿಕ ಉದ್ದೇಶಕ್ಕೆ ಲಘು ವಿಮಾನ ಹಾರಾಟ ಮಾಡುವುದನ್ನು ನಿರ್ಬಂಧಿಸಲಾಗದು” ಎಂದು ವಾದಿಸಿದ್ದರು.

ಇದಕ್ಕೆ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “2018ರ ಡಿಸೆಂಬರ್‌ 28ರಂದು ನಾಗರಿಕ ವಿಮಾನಯಾನ ಇಲಾಖೆ ಹೊರಡಿಸಿರುವ ನಾಗರಿಕ ವಿಮಾನಯಾನ ಅಗತ್ಯಗಳಲ್ಲಿ ಅರ್ಜಿದಾರರ ಆಕ್ಷೇಪಿತ ಭೂಮಿಯೂ ಸೇರಿದೆ. ಹೀಗಾಗಿ, ಅರ್ಜಿದಾರರ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ವಾದಿಸಿದ್ದರು.

ಹಿಂದಿನ ಲೇಖನಭಾವನೆಗಳನ್ನು ಬದಿಗಿರಿಸಿ ಪರೀಕ್ಷೆ ಬರೆಯಿರಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಮುಂದಿನ ಲೇಖನಕೆಲಸದ ಸ್ವರೂಪ ಅನುಮತಿಸಿದರೆ ಮಾತ್ರ ಹೆರಿಗೆ ರಜೆ ಬಳಿಕ ಮನೆಯಿಂದಲೇ ಕೆಲಸ ಮಾಡಬಹುದು: ಹೈಕೋರ್ಟ್