ಮನೆ ಸುದ್ದಿ ಜಾಲ ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

0

ಜೂ ಎನ್​​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಡ್ರ್ಯಾಗನ್’, ‘ವಾರಣಾಸಿ’, ‘ಪೆದ್ದಿ’ ಇನ್ನಿತರೆ ಕೆಲ ಸಿನಿಮಾಗಳ ರೀತಿ ದೊಡ್ಡ ಸದ್ದು ಮಾಡುತ್ತಿಲ್ಲ ಆದರೆ ಸದ್ದಿಲ್ಲದೇ ಬೃಹತ್ ಆದ, ಭಾರಿ ಬಜೆಟ್​​ನ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾವನ್ನು ತಯಾರು ಮಾಡುತ್ತಿದೆ ಚಿತ್ರತಂಡ.

ಪ್ರಶಾಂತ್ ನೀಲ್ ತಮ್ಮ ಈ ವರೆಗಿನ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ನಿರ್ಮಿಸಿರುವುದು ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ನೀಲ್ ಅವರು ಹೊರದೇಶಕ್ಕೆ ಸಹ ಹೋಗಿದ್ದು, ಅಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಿದ್ದಾರೆ. ಮಾತ್ರವಲ್ಲದೆ ಸಿನಿಮಾಕ್ಕೆ ಖ್ಯಾತ ಹಾಲಿವುಡ್ ತಂಡದ ನೆರವನ್ನು ಸಹ ಪಡೆದಿದ್ದಾರೆ.

ಇತ್ತೀಚೆಗಷ್ಟೆ ಇಡೀ ಚಿತ್ರತಂಡ ಜೋರ್ಡನ್​​ಗೆ ಹೋಗಿದ್ದು ಅಲ್ಲಿ ಅದ್ಧೂರಿ ಆಕ್ಷನ್ ಮತ್ತು ಚೇಸ್ ದೃಶ್ಯಗಳ ಚಿತ್ರೀಕರಣವನ್ನು ಮಾಡಿದೆ. ಈ ವೇಳೆ ಜೋರ್ಡನ್ ಎಸ್​​ಎಫ್​​ಎಕ್ಸ್ ಹೆಸರಿನ ಖ್ಯಾತನಾಮ ತಂಡದ ನೆರವನ್ನು ಚಿತ್ರತಂಡ ಪಡೆದುಕೊಂಡಿದೆ. ಜೋರ್ಡನ್ ಎಸ್​​ಎಫ್​​ಎಕ್ಸ್ ತಂಡವು ಸಿನಿಮಾ ತಂತ್ರಜ್ಞರ ತಂಡವಾಗಿದ್ದು, ವಿಶೇಷವಾಗಿ ಸಿನಿಮಾಗಳ ಆಕ್ಷನ್ ದೃಶ್ಯ, ವಿಎಫ್​​ಎಕ್ಸ್ ಮತ್ತು ಸೌಂಡ್ ಡಿಸೈನ್​​ಗಳಲ್ಲಿ ಪರಿಣಿತಿ ಪಡೆದುಕೊಂಡಿದೆ.

ಆಸ್ಕರ್ ವಿಜೇತ ‘ಡ್ಯೂನ್’, ‘ಜಾನ್ ವಿಕ್’ ಇನ್ನೂ ಹತ್ತು ಹಲವು ಅದ್ಧೂರಿ ಹಾಲಿವುಡ್ ಆಕ್ಷನ್ ಸಿನಿಮಾಗಳಿಗೆ ಜೋರ್ಡನ್ ಎಸ್​​ಎಫ್​​ಎಕ್ಸ್ ತಂಡ ಕೆಲಸ ಮಾಡಿದೆ. ಇದೀಗ ಇದೇ ತಂಡ ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೂ ಕೆಲಸ ಮಾಡಿದೆ. ಪ್ರಶಾಂತ್ ನೀಲ್ ಚಿತ್ರೀಕರಣ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಸಾಮಾನ್ಯವಾದ ಸಿನಿಮಾ ಅಲ್ಲ, ಭಾರಿ ದೊಡ್ಡ ಆಕ್ಷನ್ ಸಿನಿಮಾ ಎಂಬುದಕ್ಕೆ ಆ ಚಿತ್ರ ಸಾಕ್ಷಿಯಾಗಿದೆ.

ಜೂ ಎನ್​​ಟಿಆರ್ ಹಾಗೂ ನೀಲ್ ಅವರ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಮಲಯಾಳಂನ ಟೊವಿನೊ ಥಾಮಸ್ ಅವರೂ ಸಹ ನಟಿಸಬೇಕಿತ್ತು. ಆದರೆ ಅವರು ಅವಕಾಶ ಒಲ್ಲೆ ಎಂದಿದ್ದು, ಅವರ ಜಾಗಕ್ಕೆ ಯಾವ ನಟ ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಇದೆ. ಸಿನಿಮಾದ ಚಿತ್ರೀಕರಣ ತುಸು ನಿಧಾನ ಗತಿಯಲ್ಲಿಯೇ ಸಾಗಿದೆ. ಸಿನಿಮಾವನ್ನು ಕರ್ನಾಟಕ, ಹೈದರಾಬಾದ್, ಜೋರ್ಡನ್ ಇನ್ನೂ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.