ಮನೆ ರಾಜಕೀಯ ಮಧ್ಯಂತರ ವರದಿ ಬಂದ ಕೂಡಲೇ 7ನೇ ಪರಿಷ್ಕೃತ ವೇತನ ಜಾರಿ: ಸಿಎಂ ಬೊಮ್ಮಾಯಿ

ಮಧ್ಯಂತರ ವರದಿ ಬಂದ ಕೂಡಲೇ 7ನೇ ಪರಿಷ್ಕೃತ ವೇತನ ಜಾರಿ: ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ಏಳನೇ ಪರಿಷ್ಕೃತ ವೇತನ ಜಾರಿಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಬಂದ ಕೂಡಲೇ ಜಾರಿ ಮಾಡಲಾಗುತ್ತದೆ. 2023-24 ನೇ ಸಾಲಿನಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‌ ಬಜೆಟ್​’ನಲ್ಲಿ ಏಳನೇ ವೇತನ ಆಯೋಗ ಜಾರಿಗೆ ಹಣ ತೆಗೆದಿಟ್ಟಿದ್ದೇವೆ. ಈ ಕುರಿತು ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸಿದ್ದರಿರುವುದಾಗಿ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಚುನಾವಣಾ ಏಜೆಂಟರಂತೆ ವರ್ತಿಸುತ್ತಾರೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಭೇಟಿಯಿಂದ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ.‌ ಮೋದಿ ಅವರು ಬಂದ ಮೇಲೆ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್ಸಿಗರು ವಿಚಲಿತಗೊಂಡಿದ್ದಾರೆ. ಸಿದ್ದರಾಮಯ್ಯ ಅವರು ಅನುಭವಿ ಮಾಜಿ ಸಿಎಂ ಆಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಹಾಗಾದರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟಾ? ಎಂದು ಪ್ರಶ್ನಿಸಿದರು.

ಈಗಾಗಲೇ ಪಕ್ಷ ಬಲವರ್ಧನೆ ನಡೆಯುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಪಕ್ಷ ಬಲವರ್ಧನೆ ದೃಷ್ಟಿಯಿಂದ ಮತ್ತೆ ರಾಜ್ಯಕ್ಕೆ ಬರುತ್ತಾರೆ. ದಾವಣಗೆರೆಯಲ್ಲಿ ಮಾರ್ಚ್​ ತಿಂಗಳಿನಿಂದ ರಥಯಾತ್ರೆ ಆರಂಭಿಸಲಾಗುವುದು ಎಂದು ತಿಳಿಸಿದರು.

ರಾಜಕೀಯ ನಿವೃತ್ತಿ ಬಗ್ಗೆ ಎಚ್​ಡಿಕೆ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರದ್ದು ಇನ್ನೂ ನಿವೃತ್ತಿಯಾಗುವ ವಯಸ್ಸಲ್ಲ. ಇನ್ನೂ ಸೇವೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲಾ ನಡೆಯುತ್ತಿರುತ್ತದೆ. ಜನ ಪ್ರಬುದ್ಧರಾಗಿದ್ದು, ಎಲ್ಲವನ್ನೂ ಗಮನಿಸುತ್ತಾರೆ.‌ ಚುನಾವಣೆಯಿಂದ ಚುನಾವಣೆಗೆ ಇನ್ನೂ ಪ್ರಬುದ್ಧರಾಗುತ್ತಿದ್ದಾರೆ.‌ ನಾವು ಮಾತನಾಡುವಾಗ ಅದರ ಹಿಂದಿರುವ ಚಿಂತನೆ, ಕಲ್ಪನೆ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

ಹಿಂದಿನ ಲೇಖನಜೀವಾವಧಿ ಶಿಕ್ಷೆಯ ಅಪರಾಧಿಗೆ ಇತರೆ ಅಪರಾಧ ಕೃತ್ಯದಲ್ಲಿ ಶಿಕ್ಷೆಯಾಗಿದ್ದರೆ ಎರಡು ಏಕಕಾಲಕ್ಕೆ ಜಾರಿ: ಹೈಕೋರ್ಟ್
ಮುಂದಿನ ಲೇಖನಪಂಪ ಪ್ರಶಸ್ತಿಗೆ ಸಿಪಿಕೆ, ಡಾ.ಬಾಬು ಕೃಷ್ಣಮೂರ್ತಿ, ಡಾ.ಎಸ್.ಆರ್.ರಾಮಸ್ವಾಮಿ ಆಯ್ಕೆ