ಐಪಿಎಲ್ : 2026ರ ನಿರ್ಣಾಯಕ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಸೋಮವಾರ ಧರ್ಮಶಾಲಾದ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಪ್ಲೇಆಫ್ ರೇಸ್ನಲ್ಲಿ ಉಳಿಯಲು ಪಂಜಾಬ್ಗೆ ಈ ಪಂದ್ಯ ನಿರ್ಣಾಯಕವಾಗಿದೆ. ಸತತ ಮೂರು ಸೋಲುಗಳ ನಂತರ ಒತ್ತಡದಲ್ಲಿರುವ ಪಂಜಾಬ್, ಈಗ ತವರಿನಲ್ಲಿ ಮತ್ತೆ ಪುಟಿದೇಳಲು ಎದುರು ನೋಡುತ್ತಿದೆ. ಪಂಜಾಬ್ ತನ್ನ ಕೊನೆಯ ಮೂರು ಪಂದ್ಯಗಳನ್ನು ಧರ್ಮಶಾಲಾದಲ್ಲೇ ಆಡಲಿದೆ ಎನ್ನಲಾಗುತ್ತಿದೆ. ಈ ಸಲದ ಐಪಿಎಲ್ನಲ್ಲಿ ಅದ್ಭುತ ಆರಂಭ ಪಡೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ಅಜೇಯ ತಂಡವಾಗಿ ಮುನ್ನುಗ್ಗಿತ್ತು, ಆದರೆ ಇದೀಗ ಸತತ ಸೋಲು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಿಂದಿನ ಪಂದ್ಯದಲ್ಲಿ ತಂಡದ ಫೀಲ್ಡಿಂಗ್ ಕಳಪೆಯಾಗಿತ್ತು, ಹಲವು ಕ್ಯಾಚ್ಗಳನ್ನು ಕೈ ಚೆಲ್ಲಿತ್ತು. ಇದಲ್ಲದೇ, ಅರ್ಶ್ದೀಪ್ ಸಿಂಗ್ ನೇತೃತ್ವದ ವೇಗದ ಬೌಲಿಂಗ್ ದಾಳಿಯು ಬಹಳಷ್ಟು ರನ್ಗಳನ್ನು ಬಿಟ್ಟುಕೊಟ್ಟಿತ್ತು. ಬ್ಯಾಟಿಂಗ್ನಲ್ಲಿ, ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರ ಆರಂಭಿಕ ಜೋಡಿ ಉತ್ತಮ ಆರಂಭದ ಹೊರತಾಗಿಯೂ ತಂಡ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.
ಈ ಕುರಿತು ಏತನ್ಮಧ್ಯೆ ದೆಹಲಿ ತಂಡವು ತವರಿನಲ್ಲಿ ಸತತ ಎರಡು ಸೋಲುಗಳನ್ನು ಅನುಭವಿಸಿದೆ. ನಿಧಾನಗತಿಯ ಮತ್ತು ಟರ್ನ್ ಪಿಚ್ಗಳಲ್ಲಿ ಬ್ಯಾಟ್ಸ್ಮನ್ಗಳು ಹೆಣಗಾಡುತ್ತಿದ್ದಾರೆ. ಬೌಲಿಂಗ್ನಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ. ಸದ್ಯ ಪಂಜಾಬ್ 10 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದರೂ, 11 ಪಂದ್ಯಗಳಲ್ಲಿ 7ರಲ್ಲಿ ಸೋತಿರುವ ದೆಹಲಿಗೆ ಇದು ಮಾಡು-ಇಲ್ಲ-ಮಡಿ ಪಂದ್ಯವಾಗಿದೆ. ಎರಡೂ ತಂಡಗಳು ಇಲ್ಲಿಯವರೆಗೆ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಪಂಜಾಬ್ ಕಿಂಗ್ಸ್ 18 ಪಂದ್ಯಗಳಲ್ಲಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತನ್ನ ವೇಗವನ್ನು ಕಾಯ್ದುಕೊಳ್ಳುತ್ತದೆಯೇ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ ಸಾಧಿಸುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.
ಹಾಗೂ ಮೇ 11 ರಿಂದ 15 ರವರೆಗೆ ಹಿಮಾಚಲ ಪ್ರದೇಶದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 11 ರಂದು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದು ಪಂದ್ಯಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. HPCA ಮೈದಾನದಲ್ಲಿರುವ ಪಿಚ್ ಆರಂಭದಲ್ಲಿ ವೇಗದ ಬೌಲರ್ಗಳಿಗೆ ಅನುಕೂಲಕರವಾಗಿರುತ್ತದೆ. ಆದ್ದರಿಂದ, ಪಂಜಾಬ್ ಕಿಂಗ್ಸ್ನ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಗಮನ ಸೆಳೆಯುತ್ತಾರೆ. ಔಟ್ಫೀಲ್ಡ್ ವೇಗವಾಗಿರುತ್ತದೆ, ಆಗಾಗ್ಗೆ ಹೆಚ್ಚಿನ ಸ್ಕೋರ್ಗಳಿಗೂ ಕಾರಣವಾಗುತ್ತದೆ. ಒಟ್ಟಾರೆಯಾಗಿ, ಈ ಕ್ರೀಡಾಂಗಣವು ಫ್ಯಾನ್ಸ್ಗಳಿಗೆ ರಸದೌತಣ ನೀಡಲಿದೆ. ಧರ್ಮಶಾಲಾದಲ್ಲಿ ನಡೆದ ಉಭಯ ತಂಡಗಳ ನಡುವಿನ ಹಿಂದಿನ ನಾಲ್ಕು ಪಂದ್ಯಗಳು ಸಮಬಲದ ಪೈಪೋಟಿಯಿಂದ ಕೂಡಿದ್ದು, ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿವೆ. 2023 ರಿಂದ, ಧರ್ಮಶಾಲಾದಲ್ಲಿ ನಡೆದ ಐದು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು ನಾಲ್ಕುಬಾರಿ ಗೆಲುವು ಸಾಧಿಸಿವೆ. ಇಲ್ಲಿಯ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 209 ಆಗಿದೆ. ಆದ್ದರಿಂದ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಯಾವುದೇ ತಂಡವು 200 ಕ್ಕಿಂತ ಹೆಚ್ಚು ರನ್ ಗಳಿಸಲು ಬಯಸುತ್ತದೆ. ಏತನ್ಮಧ್ಯೆ ಇಂದಿನ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದರೇ ಆರ್ಸಿಬಿಗೆ ಲಾಭವಾಗಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಟಾಪ್ ಅಲ್ಲಿರುವ ಆರ್ಸಿಬಿ ತಂಡ ಇಂದು ಡೆಲ್ಲಿ ಗೆದ್ದರೇ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಪಂಜಾಬ್ ಗೆದ್ದರೇ ಎರಡನೇ ಸ್ಥಾನಕ್ಕೆ ಕುಸಿಯಲಿದೆ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಕನಸು ಭಗ್ನವಾಗಲಿದೆ. ಕಾರಣ ಇಂದಿನ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಲಿ ಎಂದು ಆರ್ಸಿಬಿ ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ ಎನ್ನಬಹುದು.
















