ಮನೆ ಸುದ್ದಿ ಜಾಲ ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಲು ಜ.23ರವರೆಗೆ ಗಡುವು: ಈಡೇರಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಲು ಜ.23ರವರೆಗೆ ಗಡುವು: ಈಡೇರಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

0

ಮೈಸೂರು(Mysuru): ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 12ಕ್ಕೆ ಹೆಚ್ಚಿಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಜ.23ರವರೆಗೆ ಗಡುವು ನೀಡಲಾಗಿದೆ. ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ ಯಲಚವಾಡಿ ತಿಳಿಸಿದರು.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದಾಜು ಒಂದು ಕೋಟಿ ಇರುವ ಸಮಾಜಕ್ಕೆ ಈಗ ನೀಡುತ್ತಿರುವ ಶೇ 4ರಷ್ಟು ಮೀಸಲಾತಿಯು ಸಾಕಾಗುವುದಿಲ್ಲ. ನಮ್ಮ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಹಚ್ಚಿಸಬೇಕು ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಮಾಹಿತಿ ನೀಡಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಅಭಿನಂದಿಸುವ ಮತ್ತು ಬಾಲಗಂಗಾಧರನಾಥ ಶ್ರೀಗಳ 10ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಜ.23ರಂದು ಬೆಂಗಳೂರಿನಲ್ಲಿ ಒಕ್ಕಲಿಗರ ಮಹಾಸಂಗಮ ಕಾರ್ಯಕ್ರಮ ನಡೆಯಲಿದೆ. ಅಂದು ಹಕ್ಕೊತ್ತಾಯ ಮಂಡಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ. ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ನಡೆದ ಸಮಾಜದ ಮುಖಂಡರ ಸಭೆಯಲ್ಲೂ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶೇ 3ರಿಂದ 4ರಷ್ಟಿರುವ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲು ನೀಡಿರುವುದು ಅವೈಜ್ಞಾನಿಕವಾಗಿದೆ. ಪರಿಶಿಷ್ಟರಿಗೂ ಹೆಚ್ಚಿಸಲಾಗಿದೆ. ಹೀಗಾಗಿ, ಸಾಮಾನ್ಯ ವರ್ಗದಲ್ಲಿ ಶೇ 19ರಷ್ಟು ಮಾತ್ರ ಮೀಸಲಾತಿ ಲಭ್ಯವಾಗುತ್ತಿದೆ. ಇದರಿಂದ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ. ಇದರಿಂದ, ಕೃಷಿಯನ್ನೇ ನಂಬಿರುವ ನಮಗೆ ಬಹಳ ಅನ್ಯಾಯವಾಗುತ್ತಿದೆ. ನಮ್ಮ ಮಕ್ಕಳು ಕೂಡ ಮುಖ್ಯವಾಹಿನಿಗೆ ಬರುವುದಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಒಕ್ಕಲಿಗರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮರಿಸ್ವಾಮಿ, ಕಾರ್ಯದರ್ಶಿ ಚೇತನ್, ಉಪಾಧ್ಯಕ್ಷ ರವಿ ರಾಜಕೀಯ, ರಾಜ್ಯ ಘಟಕದ ಕಾರ್ಯದರ್ಶಿ ಗಂಗಾಧರ್, ಸಮಾಜದ ಮುಖಂಡರಾದ ಸತೀಶ್‌ ಗೌಡ, ಯಮುನಾ ಇದ್ದರು.

ಹಿಂದಿನ ಲೇಖನಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್
ಮುಂದಿನ ಲೇಖನಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ- ಏಳು ಮಂದಿ ರಕ್ಷಣೆ