ಕೇರಳ: ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ ಕೇರಳದಲ್ಲಿ ನಡೆದಿದೆ.
ಸೂರ್ಯ ಸುರೇಂದ್ರನ್ ಎಂಬ 24 ವರ್ಷದ ಯುವತಿ ಓಲಿಯಾಂಡರ್ ಹೂವು ಸ್ಥಳೀಯವಾಗಿ ಮಲಯಾಳಂ ಭಾಷೆಯಲ್ಲಿ ‘ಅರಳಿ ಪೂ’ ಎಂದು ಕರೆಯಲಾಗುವ ಹೂವು ತಿಂದಿದ್ದಾಳೆ.
ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ, ಭಾನುವಾರದಂದು ತನ್ನ ಹೊಸ ಕೆಲಸವನ್ನು ಪ್ರಾರಂಭಿಸಲು ನೆಡುಂಬಸ್ಸೆರಿ ವಿಮಾನ ನಿಲ್ದಾಣದಿಂದ ಗುರುವಾರ ಯುಕೆಗೆ ಪ್ರಯಾಣಿಸಲು ಸಿದ್ಧತೆ ನಡೆಸಿದ್ದಳು. ಆದರೆ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ಕಾರಣ ಹೃದಯಾಘಾತ ಎಂದು ಘೋಷಿಸಲಾಗಿದೆ.
ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದೆ ಎಂದು ಬಹಿರಂಗಪಡಿಸಿದ್ದಾರೆ. ಆಕೆಯ ಹಠಾತ್ ಸಾವಿನ ಕಾರಣವನ್ನು ಪತ್ತೆ ಹಚ್ಚಲಾಗಿದೆ ಎಂದು ಹರಿಪಾಡ್ ಠಾಣಾಧಿಕಾರಿ ಕೆ.ಅಭಿಲಾಷ್‌ಕುಮಾರ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅರಳಿ ಹೂವು ಮತ್ತು ಎಲೆ ತಿಂದದ್ದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.