ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೇ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಘಟನೆಯಲ್ಲಿ, 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಸಹೋದರಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ದಾಳಿಯನ್ನು ತಡೆಯಲು ಮುಂದಾದ ತಂದೆ-ತಾಯಿ ಮೇಲೆಯೂ ಆತ ಹಲ್ಲೆ ನಡೆಸಿದ್ದಾನೆ. ಬಳಿಕ ಆತ ತನ್ನ ಮೇಲೆಯೇ ಚಾಕುವಿನಿಂದ ಇರಿದುಕೊಂಡಿದ್ದಾನೆ.

ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಯಿ ವೆಂಕಟಮಣಿ ದೀಪ್ (18) ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಘಟನೆಯಲ್ಲಿ ಆತನ ಅಕ್ಕ ಪ್ರಗತಿ (19) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡ ತಂದೆ ವೆಂಕಟ ನಾಯ್ಡು (45) ಅವರನ್ನು ಬಳ್ಳಾರಿಯ ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ತಾಯಿ ಸೌಜನ್ಯ (40) ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕೃತ್ಯಕ್ಕೆ ಆನ್‌ಲೈನ್ ಗೇಮ್‌ಗಳ ಪ್ರಭಾವ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ದೃಢೀಕರಣ ಇನ್ನೂ ಹೊರಬಿದ್ದಿಲ್ಲ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.













