ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಸರ್ಪ್ರೈಸ್ ನೀಡಿದ್ದು, ಚಿತ್ರದ ನಿರ್ದೇಶಕಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಗೀತು ಮೋಹನ್ದಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಬಿಟಿಎಸ್ (Behind The Scenes) ವಿಡಿಯೊವನ್ನು ಬಿಡುಗಡೆ ಮಾಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣದ ಕೆಲವು ವಿಶೇಷ ಕ್ಷಣಗಳನ್ನು ವಿಡಿಯೊದಲ್ಲಿ ಅನಾವರಣಗೊಳಿಸಲಾಗಿದೆ. ಶೂಟಿಂಗ್ ಸೆಟ್‌ನ ಅದ್ದೂರಿತನ ಹಾಗೂ ಚಿತ್ರೀಕರಣದ ವೈಖರಿ ಈ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.

ಸುಮಾರು ಒಂದು ನಿಮಿಷದ ಈ ಬಿಟಿಎಸ್ ವಿಡಿಯೊದಲ್ಲಿ ನಿರ್ದೇಶಕಿ ಗೀತು ಮೋಹನ್ದಾಸ್ ಸಂಪೂರ್ಣ ಚಿತ್ರತಂಡವನ್ನು ಮುನ್ನಡೆಸುತ್ತಿರುವ ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿವೆ. ಕೈಯಲ್ಲಿ ಮೈಕ್ರೋಫೋನ್ ಹಿಡಿದು ಕಲಾವಿದರಿಗೆ ನಿರ್ದೇಶನ ನೀಡುತ್ತಾ, ಪ್ರತಿಯೊಂದು ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಮಾರ್ಗದರ್ಶನ ಮಾಡುತ್ತಿರುವ ಅವರ ಕಾರ್ಯಶೈಲಿ ಗಮನ ಸೆಳೆಯುತ್ತಿದೆ.
ಸೆಟ್‌ನಲ್ಲಿ ಅವರ ಮೇಕಿಂಗ್ ಕೌಶಲ್ಯ ಹಾಗೂ ಸಿನಿಮಾದ ಮೇಲಿನ ಸ್ಪಷ್ಟ ದೃಷ್ಟಿಕೋನ ಈ ವಿಡಿಯೊದಲ್ಲಿ ಎದ್ದು ಕಾಣುತ್ತಿದೆ. ವಿಡಿಯೊದ ಕೊನೆಯಲ್ಲಿ “ಹ್ಯಾಪಿ ಬರ್ತ್‌ಡೇ ಗೀತು ಮೋಹನ್ದಾಸ್” ಎಂದು ಚಿತ್ರತಂಡ ಶುಭಾಶಯ ಕೋರಿದೆ.
ಬಿಡುಗಡೆಯಾದ ಈ ಬಿಟಿಎಸ್ ವಿಡಿಯೊದಲ್ಲಿ ಬೃಹತ್ ಸೆಟ್‌ಗಳು, ಅದ್ದೂರಿ ಆ್ಯಕ್ಷನ್ ಸನ್ನಿವೇಶಗಳು, ಸ್ಫೋಟದ ದೃಶ್ಯಗಳು ಹಾಗೂ ವೈವಿಧ್ಯಮಯ ಲೊಕೇಷನ್‌ಗಳು ಕಾಣಿಸಿಕೊಂಡಿದ್ದು, ‘ಟಾಕ್ಸಿಕ್’ ಸಿನಿಮಾ ಭಾರಿ ಪ್ರಮಾಣದಲ್ಲಿ ನಿರ್ಮಾಣವಾಗುತ್ತಿದೆ ಎಂಬುದನ್ನು ತೋರಿಸಿಕೊಡುತ್ತಿವೆ.

ಹಾಲಿವುಡ್ ಶೈಲಿಯ ಮೇಕಿಂಗ್ ಹೊಂದಿರುವ ಈ ಸಿನಿಮಾದ ಹಿಂದೆ ಇರುವ ಶ್ರಮ ಮತ್ತು ತಾಂತ್ರಿಕ ಗುಣಮಟ್ಟ ವಿಡಿಯೊದಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಈ ಪ್ಯಾನ್-ಇಂಡಿಯಾ ಚಿತ್ರಕ್ಕೆ ‘A Fairy Tale for Grown-Ups’ ಎಂಬ ಅಡಿಬರಹವಿದೆ. ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಆ್ಯಕ್ಷನ್ ಡ್ರಾಮಾ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಬಿಡುಗಡೆಯಾಗಿರುವ ಈ ಮೇಕಿಂಗ್ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.













