ನೆಲಮಂಗಲ ಬುಧವಾರ (ಮೇ 06) : ಒಬ್ಬ ಆರೋಪಿ ವಿಚಾರಣೆ ವೇಳೆ ಲಾಕರ್ ಕೀ ನುಂಗಿ ಹೈಡ್ರಾಮಾ ನಡೆಸಿದ ಘಟನೆಯೊಂದು ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಎಂಬಾತನೇ ಈ ವಿಚಿತ್ರ ಕೃತ್ಯ ಎಸಗಿದ ಆರೋಪಿ. ಕೀ ನುಂಗುವ ಮೂಲಕ ಪೊಲೀಸರಿಗೆ ಟೆನ್ಷನ್ ಕೊಟ್ಟಿದ್ದ. ಆದರೆ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಏಪ್ರಿಲ್ 24(ಶುಕ್ರವಾರ) ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಾಲಕಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪ ಹಿನ್ನೆಲೆ ಯುವಕ ಕಾರ್ತಿಕ್ ಅಲಿಯಾಸ್ ರಾಮು ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಕಾರ್ತಿಕ್ ಅಲಿಯಾಸ್ ರಾಮು ನನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸರು ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೋಕ್ಸೋ ಕೇಸ್ ಭಯಕ್ಕೆ ಲಾಕರ್ ಕೀ ನುಂಗಿದ್ದಾನೆ. ಆ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಘಟನೆಯಿಂದ ಪೊಲೀಸ್ ಸಿಬ್ಬಂದಿ ಬೆಚ್ಚಿಬಿದ್ದರು ಎನ್ನುವುದಾಗಿದೆ.
ಈ ಘಟನೆ ನಡೆಯುತ್ತಿದ್ದಂತೆ ತಕ್ಷಣ ಆರೋಪಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ 3 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆರೋಪಿಗೆ 10 ಕೆಜಿ ಬಾಳೆಹಣ್ಣು ತಿನ್ನಿಸಿ ಕೀ ಹೊರ ಬರುವ ಪ್ರಯತ್ನದಲ್ಲಿದ್ದರು. ಮೂರು ದಿನದ ನಂತರ ಮಲದ ಮೂಲಕ ಕೀ ಹೊರಬಂದ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.

















