ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಪಾಲಿಕೆಯ ಕಚೇರಿಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ. ನಾಗರಿಕ ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ಹಾಗೂ ಅಕ್ರಮವಾಗಿ ‘ಬಿ-ಖಾತೆ’ ಮತ್ತು ‘ಫಾರಂ-2’ ವಿತರಣೆ ಮಾಡುತ್ತಿರುವ ಗಂಭೀರ ದೂರುಗಳ ಆಧಾರದ ಮೇಲೆ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ತೀವ್ರ ಪರಿಶೀಲನೆ ಬಳ್ಳಾರಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಮಾತ್ರವಲ್ಲದೆ, ನಗರದ ವಿವಿಧೆಡೆ ಇರುವ ವಲಯ ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದಲೇ ದಾಳಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ಕಚೇರಿಗಳಿಗೆ ನುಗ್ಗಿದ್ದು, ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಬೆಳಗ್ಗಿನಿಂದಲೇ ಆರಂಭವಾದ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ತಂಡಗಳು ಪ್ರಮುಖವಾಗಿ ಆಸ್ತಿ ದಾಖಲೆಗಳು, ಬಿ-ಖಾತೆ ಮತ್ತು ಫಾರಂ-2 ಅರ್ಜಿಗಳು, ವಿಳಂಬವಾಗಿರುವ ಕಡತಗಳು, ಜೊತೆಗೆ ಅಕ್ರಮ ಹಣದ ಬೇಡಿಕೆ ಮತ್ತು ಭ್ರಷ್ಟಾಚಾರ. ಕಳೆದ ಕೆಲವು ತಿಂಗಳುಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ ಮತ್ತು ಪ್ರತಿಯೊಂದು ನಾಗರಿಕ ಸೇವೆಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಧ್ಯವರ್ತಿಗಳ ಮೂಲಕ ಭಾರಿ ಪ್ರಮಾಣದ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ವಿಶೇಷವಾಗಿ, ಅನಧಿಕೃತ ಲೇಔಟ್ಗಳು ಹಾಗೂ ನಿಯಮಬಾಹಿರ ಆಸ್ತಿಗಳಿಗೆ ಅಕ್ರಮವಾಗಿ ‘ಬಿ-ಖಾತೆ’ ಮತ್ತು ‘ಫಾರಂ-2’ಗಳನ್ನು ಸೃಷ್ಟಿಸಿ ವಿತರಿಸಲು ಕಂದಾಯ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಅಕ್ರಮ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ತಲುಪಿತ್ತು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾವ್ ಅವರು ರಹಸ್ಯ ಕಾರ್ಯಾಚರಣೆ ನಡೆಸಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಮಹತ್ವದ ದಾಖಲೆಗಳು ಲೋಕಾಯುಕ್ತ ವಶಕ್ಕೆ ದಾಳಿಯ ವೇಳೆ ಕಂದಾಯ ಮತ್ತು ನಗರಾಭಿವೃದ್ಧಿ ಶಾಖೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದಕ್ಕೆ ಪ್ರಥಮ ದೃಷ್ಟಿಯಲ್ಲೇ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ. ಕಚೇರಿಯ ಕಂಪ್ಯೂಟರ್ ಹಾರ್ಡ್ ಡಿಸ್ಕ್, ಲಾಗ್ ಬುಕ್ ಹಾಗೂ ನಿಯಮ ಉಲ್ಲಂಘಿಸಿ ಅನುಮೋದನೆ ಪಡೆದುಕೊಂಡಿದ್ದ ನೂರಾರು ಮಹತ್ವದ ಕಡತಗಳನ್ನು ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಲೋಕಾಯುಕ್ತ ಅಧಿಕಾರಿಗಳು, “ಸಾರ್ವಜನಿಕರ ದೂರುಗಳ ಅನ್ವಯ ಈ ದಿಢೀರ್ ದಾಳಿ ನಡೆಸಲಾಗಿದೆ. ವಶಪಡಿಸಿಕೊಳ್ಳಲಾದ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಕರ್ತವ್ಯ ಲೋಪ ಎಸಗಿದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದ್ದಾರೆ. ಲೋಕಾಯುಕ್ತರ ಈ ದಿಢೀರ್ ಭೇಟಿಯಿಂದಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ಹಾಗೂ ಲಂಚದ ದಂಧೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳಲ್ಲಿ ನಡುಕ ಹುಟ್ಟಿದೆ ಎನ್ನಲಾಗುತ್ತಿದೆ.
















