ಕಾಲಿವುಡ್ ನಟ ಸೂರ್ಯ ಮತ್ತು ಬಹುಭಾಷಾ ನಟಿ ತ್ರಿಷಾ ಅಭಿನಯದ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೇ 15ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಇದೀಗ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ನಟ ಸೂರ್ಯ ಮತ್ತು ತ್ರಿಷಾ ಜೋಡಿಯ ಈ ಅದ್ಭುತ ಯಶಸ್ಸನ್ನು ಚಿತ್ರತಂಡ ಸಂಭ್ರಮಿಸಿದೆ. ನಿರ್ಮಾಣ ಸಂಸ್ಥೆ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಈ ಕುರಿತು ಪೋಸ್ಟರ್ ಹಂಚಿಕೊಂಡಿದ್ದು, ‘ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅವರ ಬಿಗ್ಗೆಸ್ಟ್ ಬ್ಲಾಸ್ಟ್ ಕರುಪ್ಪು ವಿಶ್ವಾದ್ಯಂತ 300 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಮೆಗಾ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ’ ಎಂದು ಬರೆದುಕೊಂಡಿದೆ. ಭಾರತದಲ್ಲೇ ಈ ಸಿನಿಮಾ ಬರೋಬ್ಬರಿ 194.55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ 168.15 ಕೋಟಿ ರೂ. ಆಗಿದೆ. ‘ಕರುಪ್ಪು’ ಸಿನಿಮಾ ಸೂರ್ಯ ಮತ್ತು ತ್ರಿಷಾ ಇಬ್ಬರ ಕೆರಿಯರ್‌ನಲ್ಲೂ ದೊಡ್ಡ ಮೈಲಿಗಲ್ಲಾಗಿದೆ ಎನ್ನಲಾಗುತ್ತಿದೆ.
ಹಾಗೆ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದು, ಇಬ್ಬರ ನಟನೆಗೆ ಮೆಚ್ಚುಗೆ ಸಿಗುತ್ತಿದೆ. ಆರ್. ಜೆ. ಬಾಲಾಜಿ ನಿರ್ದೇಶನದ ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ನೀಡಿದ್ದು, ಜಿ. ಕೆ. ವಿಷ್ಣು ಅವರ ಛಾಯಾಗ್ರಹಣವಿದೆ. ಸೂರ್ಯ ಮತ್ತು ತ್ರಿಷಾ ಜೊತೆಗೆ ಇಂದ್ರನ್ಸ್ ಹಾಗೂ ಅನಘಾ ಮಾಯಾ ರವಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರದ ಭರ್ಜರಿ ಗೆಲುವಿನ ಬೆನ್ನಲ್ಲೇ ನಿರ್ದೇಶಕ ಆರ್. ಜೆ. ಬಾಲಾಜಿ ಸೀಕ್ವೆಲ್ ಮಾಡುವ ಆಲೋಚನೆಯನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಕರುಪ್ಪು ಚಿತ್ರಕ್ಕೆ ಸೀಕ್ವೆಲ್ ಸಾಧ್ಯವಾದರೆ, ಈ ಬಾರಿ ದೇವರು ಮತ್ತು ರಾಜಕೀಯ ನಡುವಿನ ಸಂಘರ್ಷವನ್ನು ತೋರಿಸಲು ಬಯಸುತ್ತೇನೆ. ನನ್ನ ಹಿಂದಿನ ಮೂಕುದಿ ಅಮ್ಮನ್ ಸಿನಿಮಾ ದೇವರು ಮತ್ತು ನಕಲಿ ಸ್ವಾಮೀಜಿ ನಡುವಿನ ಕಥೆಯಾಗಿತ್ತು. ಈಗಿನ ಕರುಪ್ಪು ಸಿನಿಮಾ ದೇವರು ಮತ್ತು ನ್ಯಾಯಾಂಗ ನಡುವಿನ ಹೋರಾಟವಾಗಿದೆ. ಮುಂದಿನ ಚಿತ್ರದಲ್ಲಿ ರಾಜಕೀಯವನ್ನು ತರಲಿದ್ದೇನೆ’ ಎಂದಿದ್ದಾರೆ ಅವರು ಆದರೆ ಈ ಕಥೆಯ ಮೇಲೆ ಕೆಲಸ ಮಾಡಲು ತಮಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದಿರುವ ಅವರು, ಪ್ರೇಕ್ಷಕರು ಮೊದಲ ಭಾಗವನ್ನು ಮರೆತ ನತರವೇ ಅತ್ಯುತ್ತಮವಾದ ಸೀಕ್ವೆಲ್ ಕೊಡುವ ಯೋಜನೆ ನನ್ನದು ಎಂದಿದ್ದಾರೆ ಎನ್ನಲಾಗಿದೆ.

















