ಮನೆ ರಾಜಕೀಯ ಪಡುವಾರಹಳ್ಳಿ-ವಿನಾಯಕನಗರದ ಸುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಲ್. ನಾಗೇಂದ್ರ

ಪಡುವಾರಹಳ್ಳಿ-ವಿನಾಯಕನಗರದ ಸುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಲ್. ನಾಗೇಂದ್ರ

0

ಮೈಸೂರು: ಪಡುವಾರಹಳ್ಳಿ-ವಿನಾಯಕನಗರದ 1ನೇ ಮೇನ್ ನಿಂದ 6ನೇ ಮೇನ್ ರಸ್ತೆಯವರೆಗೆ ಹಾಗೂ ಕಾಲೋನಿಯ ಸುತ್ತಲಿನ ಪ್ರದೇಶಗಳಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ 10.30 ವರೆಗೆ ಪಾದಯಾತ್ರೆ ನಡೆಸಿ ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಶಾಸಕ ಎಲ್.ನಾಗೇಂದ್ರ ಕ್ರಮವಹಿಸಿದರು.
ಪಾದಯಾತ್ರೆಯನ್ನು ಬೆಳಿಗ್ಗೆ 7.00 ಗಂಟೆಗೆ ಪಡುವಾರಹಳ್ಳಿಯ 6ನೇ ಮೇನ್ ಗಣಪತಿ ದೇವಸ್ಥಾನದ ಬಳಿಯಿಂದ ಪ್ರಾರಂಭಿಸಿ, 1ನೇ ಮೇನ್ ರಸ್ತೆ ಅಡ್ಡ ರಸ್ತೆಗಳು ಸೇರಿದಂತೆ 6ನೇ ಮೇನ್ ಮುಖ್ಯರಸ್ತೆ ಹಾಗೂ ವಿವಿಧ ಅಡ್ಡ ರಸ್ತೆಗಳಲ್ಲಿ ಸಂಚರಿಸಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಶಾಸಕರ ವಿವೇಚನಾ ಎಸ್.ಎಫ್.ಸಿ ವಿಷೇಷ ಅನುದಾನ ಒಟ್ಟು ರೂ.65.00 ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ರಸ್ತೆ ಅಭಿವೃದ್ದಿ ಚರಂಡಿ ನಿರ್ಮಾಣ, ಒಳಚರಂಡಿ ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ಅನುದಾನ ರೂ. 11.23 ಲಕ್ಷ, ಮೈಸೂರು ಮಹಾನಗರ ಪಾಲಿಕೆಯ ಎಸ್.ಎಫ್.ಸಿ ಯೋಜನೆಯಡಿ ರೂ. 37.00 ಲಕ್ಷ ಆರಾಧನಾ ಯೋಜನೆಯಡಿ ದೇವಾಲಯಗಳ ಅಭಿವೃದ್ದಿಗಾಗಿ ಬಿಡುಗಡೆ ಮಾಡಲಾದ ಅನುದಾನದಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳು, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ ರೂ.49.00 ಲಕ್ಷಗಳಲ್ಲಿ ವಿವಿಧ ಸಮುದಾಭವನ ಅಭಿವೃದ್ದಿ, ಆಟೋ ನಿಲ್ದಾಣಗಳ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು, ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರವಾಗಿ ಕಾಮಗಾರಿಯನ್ನು ಗುಣಮಟ್ಟ ಕಾಪಾಡಿಕೊಂಡು ನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಪಡುವಾರಹಳ್ಳಿಯಲ್ಲಿ ಕೆಲವು ಅಡ್ಡರಸ್ತೆಗಳಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿಲ್ಲವೆಂದು ಸಾರ್ವಜನಿಕರು ಮನವಿ ಮಾಡಲಾಗಿ, ಮಾನ್ಯ ಶಾಸಕರು ಕಾವೇರಿ ನೀರು ಸರಬರಾಜು ಮಾಡಲು ಅಗತ್ಯ ಕ್ರಮವಹಿಸುವಂತೆ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವು ನಿವಾಸಿಗಳು ನೀರಿನ ಬಿಲ್ಲಿನಲ್ಲಿ ಅತಿ ಹೆಚ್ಚಿನ ಮೊತ್ತದ ಬಾಕಿ ಬರುತ್ತಿದ್ದು, ಈ ಮೊತ್ತದಲ್ಲಿ ಬಡ್ಡಿಯನ್ನು ಮನ್ನಾ ಮಾಡಿಸಿದಲ್ಲಿ ಸಂಪೊರ್ಣ ಬಾಕಿ ಮೊತ್ತವನ್ನು ಪಾವತಿಸುವುದಾಗಿ ತಿಳಿಸಲಾಗಿ ಈ ಕುರಿತಂತೆ ಖುದ್ದು ನಾನೇ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಡ್ಡಿ ಮನ್ನಾಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ತೀರ್ಮಾನ ವಾಗಲಿರುವುದರಿಂದ ಅಲ್ಲಿಯವರೆಗೆ ಪ್ರತಿ ಮಾಹೆ ಸಾಧ್ಯವಾದಷ್ಟು ಮೊತ್ತವನ್ನು ಪಾವತಿಸಿ ದಂಡವನ್ನು ತಪ್ಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಪಡುವಾರಹಳ್ಳಿ-ವಿನಾಯಕನಗರ ಪ್ರದೇಶದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಒಳಚರಂಡಿ ಕಾಮಗಾರಿಗಳಲ್ಲಿ ಅನೇಕ ಕಡೆಗಳಲ್ಲಿ ಹೆಗ್ಗಣ ಕಾಟದಿಂದಾಗಿ ಕುಸಿದಿದ್ದು, ಈ ಒಳಚರಂಡಿಗಳ ಸಂಪೂರ್ಣ ಸಮೀಕ್ಷೆ ನಡೆಸಿ ಒಂದು ಡಿ.ಪಿ.ಆರ್ ತಯಾರಿಸಿ ಎಲ್ಲಾ ಒಳ ಚರಂಡಿಗಳ ಸುತ್ತ ಕಾಂಕ್ರೀಟ್ ನಿಂದ ವೈಜ್ಞಾನಿಕವಾಗಿ ಸಧೃಡಗೊಳಿಸಲು ಕ್ರಮವಹಿಸುವಂತೆ ಈ ಕಾಮಗಾರಿಗೆ ಅಗತ್ಯವಾದ ಅಂದಾಜು ಅನುದಾನವನ್ನು ತಮ್ಮ ನಿಧಿಯಿಂದ ಬಿಡುಗಡೆಗೊಳಿಸುವುದಾಗಿ ಸ್ಥಳದಲ್ಲೇ ಆದೇಶ ನೀಡಿದರು.

ಪಡುವಾರಹಳ್ಳಿಯಲ್ಲಿ ಪಶುಪಾಲನಾ ಇಲಾಖೆಗೆ ಶಾಸಕರ ಪರಿಶ್ರಮದಿಂದ ಮಂಜೂರು ಮಾಡಿಸಿರುವ 70*80 ಅಡಿ ನಿವೇಶನದಲ್ಲಿ ಸ್ವಂತ ಕಟ್ಟಡವಿಲ್ಲದ ಈ ಸಂಸ್ಥೆಗೆ ಮೈಸೂರು ಮಹಾನಗರ ಪಾಲಿಕೆಯ ಸಿ.ಎಸ್.ಆರ್ ಅಥವಾ ಇನ್ನಾವುದೇ ಅನುದಾನದಲ್ಲಿ ಅಗತ್ಯ ಕೊಠಡಿಗಳ ಕಟ್ಟಡವೊಂದನ್ನು ನಿರ್ಮಾಣ ಮಾಡಲು ಜರೂರು ಅಂದಾಜು ಪಟ್ಟಿ ತಯಾರಿಸಿ ಮುಂದಿನ ಕ್ರಮವಹಿಸುವಂತೆ ಉಪ ಆಯುಕ್ತರು (ಅಭಿವೃದ್ದಿ) ರವರಿಗೆ ಸೂಚನೆ ನೀಡಿದರು.

ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನ ಮುಂದೆ ಪುಂಡುಹುಡುಗರು ದ್ವಿಚಕ್ರವಾಹನದಲ್ಲಿ ವೀಲಿಂಗ್ ಮಾಡುತ್ತಿದ್ದು, ಕಾಲೇಜು ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಕಂಡುಬರುತ್ತಿರುವುದಾಗಿ ಸಾರ್ವಜನಿಕರು ನೀಡಿದ ದೂರಿನಂತೆ, ಸ್ಥಳದಲ್ಲಿಯೇ ಹಾಜರಿದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಈ ಪ್ರದೇಶಗಳಲ್ಲಿ ಹೆಚ್ಚಿನ ಗಸ್ತು ತಿರುಗಲು ವ್ಯವಸ್ಥೆ ಮಾಡುವಂತೆ ಹಾಗೂ ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಹಿಂದಿನ ಲೇಖನಕಠಿಣ ವ್ರತ ಪಾಲಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ನಟ ಅಜಯ್ ದೇವಗನ್
ಮುಂದಿನ ಲೇಖನಕಲಬುರಗಿ: ಪತ್ನಿ ಹತ್ಯೆಗೈದು, ಮಕ್ಕಳೊಂದಿಗೆ ಪತಿ ಪರಾರಿ