ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವೇಗ ಮತ್ತು ಫಲಿತಾಂಶಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ 51ನೇ ಪ್ರಗತಿ ಸಭೆಯಲ್ಲಿ ಸ್ವಚ್ಛ ಭಾರತ ಮಿಷನ್ 2.0 ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಪ್ರಗತಿಯನ್ನು ಅವರು ಪರಿಶೀಲಿಸಿದರು.
ಕೇವಲ ಮೂಲಸೌಕರ್ಯ ನಿರ್ಮಾಣ ಮಾಡುವುದು ಸಾಕಾಗುವುದಿಲ್ಲ. ಅದರ ನೈಜ ಫಲಿತಾಂಶ ಜನರಿಗೆ ಗೋಚರಿಸಬೇಕು ಎಂದು ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಮುಂದೆ ಪ್ರತೀ ತಿಂಗಳು ರಾಜ್ಯ ಮಟ್ಟದಲ್ಲೂ ಯೋಜನೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಘನತ್ಯಾಜ್ಯ ನಿರ್ವಹಣಾ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಪ್ರಧಾನಿ ಸೂಚಿಸಿದ್ದಾರೆ. ವಿಶೇಷವಾಗಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಹಾಗೂ ಗೋವರ್ಧನ್ ಯೋಜನೆಗಳ ಕಾಮಗಾರಿಯಲ್ಲಿ ವಿಳಂಬವಾಗಬಾರದು ಎಂದು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಯೋಜನೆಗಳು ಸಮಯಕ್ಕೆ ಪೂರ್ಣಗೊಂಡರೆ ಮಾತ್ರ ಜನರಿಗೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಒದಗಿಸಲು ಸಾಧ್ಯ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನಗರ ಪ್ರದೇಶಗಳಲ್ಲಿ ಶುದ್ಧ ಇಂಧನ ಬಳಕೆ ಹೆಚ್ಚಿಸಲು ವಸತಿ ಸಮುಚ್ಚಯಗಳು ಹಾಗೂ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ವೇಗ ನೀಡುವಂತೆ ಪ್ರಧಾನಿ ಕರೆ ನೀಡಿದ್ದಾರೆ.ಇದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ದೇಶ ಶುದ್ಧ ಇಂಧನದತ್ತ ವೇಗವಾಗಿ ಸಾಗಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.ವಾಧ್ವಾನ್ ಬಂದರು ಯೋಜನೆ ಸೇರಿದಂತೆ ವಿವಿಧ ರಸ್ತೆ ಮತ್ತು ಸಂಪರ್ಕ ಮೂಲಸೌಕರ್ಯ ಯೋಜನೆಗಳನ್ನೂ ಮೋದಿ ಪರಿಶೀಲಿಸಿದ್ದಾರೆ.ವಾಧ್ವಾನ್ ಬಂದರನ್ನು ಕೇವಲ ಬಂದರಾಗಿ ಮಾತ್ರ ಅಭಿವೃದ್ಧಿಪಡಿಸದೆ, ಹೆದ್ದಾರಿ, ಹೈ-ಸ್ಪೀಡ್ ರೈಲು ಹಾಗೂ ಜಲಮಾರ್ಗಗಳೊಂದಿಗೆ ಸಂಪರ್ಕ ಹೊಂದಿರುವ ‘ರಾಷ್ಟ್ರೀಯ ದ್ವಾರ’ವಾಗಿ ರೂಪಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.ಈ ಬಹುಮಾದರಿ ಸಂಪರ್ಕ ವ್ಯವಸ್ಥೆ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


















