ಹಾಸನ ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯ ನ್ನು ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕೊಲೆಯಾದ ಮಹಿಳೆ ರಮ್ಯಾ ಎ ಆರ್ (35). ಚಂದ್ರ 41 ವರ್ಷದ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ರಮ್ಯಾ ಅವರ ಪತಿ ಉಮೇಶ್ ಮೃತಪಟ್ಟಿದ್ದರು. ಬಳಿಕ ಅದೇ ಗ್ರಾಮದ ಚಂದ್ರನೊಂದಿಗೆ ರಮ್ಯಾ ಸಲುಗೆಯಿಂದ ಇದ್ದರೆಂದು ಮೃತಳ ಸಹೋದರ ತಿಳಿಸಿದ್ದಾರೆ. ”ಬೆಂಗಳೂರಿನ ಜೆ.ಪಿ. ನಗರದಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದ ರಮ್ಯಾ, ಎಪ್ರಿಲ್ 28ರಂದು ನಿಧನರಾದ ತಮ್ಮ ಅತ್ತೆ ಕಾಳಮ್ಮ ಅವರ ಅಂತ್ಯಸಂಸ್ಕಾರಕ್ಕಾಗಿ ಅತ್ತಿಹಳ್ಳಿ ಗ್ರಾಮಕ್ಕೆ ಬಂದಿದ್ದರು. ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮನೆಗೆ ಬಂದ ಚಂದ್ರ, ರಮ್ಯಾ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ರಮ್ಯಾ ನಿರಾಕರಿಸಿದ ಹಿನ್ನೆಲೆ, ಆಕ್ರೋಶಗೊಂಡ ಚಂದ್ರ ಅವರು ಮೇಲೆ ಹಲ್ಲೆ ನಡೆಸಿ ಮರ್ಮಾಂಗಕ್ಕೆ ಒದ್ದು ಗಂಭೀರವಾಗಿ ಗಾಯಪಡಿಸಿದ್ದ. ಎಪ್ರಿಲ್ 30ರಂದು ರಮ್ಯಾಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.
ಆದರೆ ಆಕೆಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ” ಎಂದು ಮೃತ ರಮ್ಯಾ ಸಹೋದರ ಲೋಕೇಶ್ ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಯಸಳೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ”18 ವರ್ಷದ ಹಿಂದೆ ಇದೇ ಗ್ರಾಮದ ಉಮೇಶ್ ಎಂಬುವರ ಜೊತೆ ತನ್ನ ಸಹೋದರಿ ರಮ್ಯಾಳನ್ನು ಮದುವೆ ಮಾಡಿಕೊಟ್ಟಿದ್ದೆವು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಯಾವುದೇ ಕಾಯಿಲೆಯಿಂದ ಉಮೇಶ್ ಮೃತಪಟ್ಟಿದ್ದು, ಪತಿಯ ಸಾವಿನ ಬಳಿಕ ರಮ್ಯಾ ಬೆಂಗಳೂರಿನ ಜೆಪಿ ನಗರದಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಊರಿಗೆ ಬಂದಾಗಲೆಲ್ಲ ಇದೇ ಗ್ರಾಮದ ಚಂದ್ರನೊಂದಿಗೆ ಹೆಚ್ಚಾಗಿ ಇರುತ್ತಿದ್ದರು. ಗಂಡ ಸತ್ತಿದ್ದರಿಂದ ಚಂದ್ರ ಆಸೆರೆಯಾಗುತ್ತಾನೆಂದು ತಿಳಿದು ನಾವುಗಳೂ ಕೂಡ ಸುಮ್ಮನಿದ್ದೆವು ಎಂದು ತಿಳಿದುಬಂದಿದೆ.
ಆದರೆ ಎ.17ರಂದು ಕಾರ್ಯ ನಿಮಿತ್ತ ರಮ್ಯಾ ಊರಿಗೆ ಬಂದಾಗ ಚಂದ್ರ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕರೆದಿದ್ದು, ಇದಕ್ಕೆ ಒಪ್ಪದಿದ್ದಕ್ಕೆ ಕಾಲುಗಳಿಂದ ಆಕೆಯ ಎದೆಗೆ, ಹೊಟ್ಟೆಗೆ ಮರ್ಮಾಂಗಕ್ಕೆ ತುಳಿದು ಹಲ್ಲೆ ಮಾಡಿದ್ದಾನೆ. ಮಾರನೇ ದಿನ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಸಕಲೇಶಪುರದ ಆಸ್ಪತ್ರೆಗೆ ದಾಖಲಿಸಿದೆವು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಮೃತಪಟ್ಟಿದ್ದು, ದ್ವೇಷದ ಹಿನ್ನೆಲೆ ಚಂದ್ರ ನಮ್ಮ ಸಹೋದರಿಯನ್ನು ಕೊಲೆ ಮಾಡಿದ್ದಾನೆ. ಈತನಿಗೆ ಕಠಿಣ ಶಿಕ್ಷೆ ನೀಡಬೇಕು” ಎಂದು ಮೃತ ರಮ್ಯಾ ಸಹೋದರ ಲೋಕೇಶ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
















