ಮನೆ ಸುದ್ದಿ ಜಾಲ Mysuru Clean: ಬಕ್ರೀದ್ ಹಬ್ಬದ ವೇಳೆ ಸ್ವಚ್ಛ ಮೈಸೂರುಗಾಗಿ ಪಾಲಿಕೆಯಿಂದ ವಿಶೇಷ ಹೈ-ಟೆಕ್ ಯೋಜನೆ!

Mysuru Clean: ಬಕ್ರೀದ್ ಹಬ್ಬದ ವೇಳೆ ಸ್ವಚ್ಛ ಮೈಸೂರುಗಾಗಿ ಪಾಲಿಕೆಯಿಂದ ವಿಶೇಷ ಹೈ-ಟೆಕ್ ಯೋಜನೆ!

0

ಮೈಸೂರು: ಬಕ್ರೀದ್ ಹಬ್ಬದ ಸಂಭ್ರಮ ನಗರದಲ್ಲಿ ಎಲ್ಲೆಡೆ ಮನೆ ಮಾಡಿದ್ದು, ಹಬ್ಬದ ದಿನಗಳಲ್ಲಿ ಹೆಚ್ಚುವರಿ ತ್ಯಾಜ್ಯ  ಉತ್ಪತ್ತಿಯಾಗುವ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನಗರ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪಾಲಿಕೆ ಆಯುಕ್ತ ಷೇಕ್ ತಸ್ವೀರ್ ಆಸೀಫ್ ವಿಶೇಷ ಘೋಷಣೆ ಮಾಡಿದ್ದಾರೆ.

ಬಕ್ರೀದ್ ಹಿನ್ನಲೆಯಲ್ಲಿ ಮೇ 28ರಿಂದ ಮೇ 30ರವರೆಗೆ ಮೂರು ದಿನಗಳ ಕಾಲ ಮೈಸೂರು ನಗರಾದ್ಯಂತ ವಿಶೇಷ ಸ್ವಚ್ಛತಾ ಕಾರ್ಯ ನಡೆಯಲಿದೆ. ಈ ಕಾರ್ಯಾಚರಣೆಗೆ ಪಾಲಿಕೆ ಒಟ್ಟು 25 ಮಿನಿ ಹಾಗೂ ಹೆವಿ ಟಿಪ್ಪರ್ ವಾಹನಗಳನ್ನು ನಿಯೋಜಿಸಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ವಾಹನಗಳು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಕಸ ಸಂಗ್ರಹ ಕಾರ್ಯ ನಡೆಸಲಿವೆ.

ಮುಖ್ಯವಾಗಿ ಮಾರುಕಟ್ಟೆ ಪ್ರದೇಶಗಳು, ಕಸಾಯಿಖಾನೆಗಳು ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಹೆಚ್ಚಿನ ಮಟ್ಟದಲ್ಲಿ ನಿಗಾ ವಹಿಸಲಾಗುತ್ತಿದೆ. ಹಬ್ಬದ ಸಮಯದಲ್ಲಿ ನಗರದ ಆರೋಗ್ಯ ಮತ್ತು ಸ್ವಚ್ಛತೆ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದಂತೆ ಪಾಲಿಕೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದೆ.

“ನಗರ ಸ್ವಚ್ಛತೆ ಎನ್ನುವುದು ಕೇವಲ ಪಾಲಿಕೆಯ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ” ಎಂದು ಆಯುಕ್ತರು ಮನವಿ ಮಾಡಿದ್ದಾರೆ. ಸಾರ್ವಜನಿಕರು ಹಬ್ಬದ ತ್ಯಾಜ್ಯವನ್ನು ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೇ, ಪಾಲಿಕೆ ಸಿಬ್ಬಂದಿಗೆ ನೀಡುವಂತೆ ಸೂಚಿಸಲಾಗಿದೆ.

ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಜೊತೆಗೆ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ನಿರ್ವಹಿಸಲು ಹೆಚ್ಚುವರಿ ತಂಡಗಳನ್ನೂ ಸಿದ್ಧವಾಗಿಡಲಾಗಿದೆ. ಹಬ್ಬದ ದಿನಗಳಲ್ಲೂ ಮೈಸೂರು ನಗರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಪಾಲಿಕೆ ಬದ್ಧವಾಗಿದೆ.

ಹಬ್ಬದ ಸಂದರ್ಭದಲ್ಲಿ ಕಸದ ಸಮಸ್ಯೆ ಉಂಟಾಗದಂತೆ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಿ, ಸ್ವಚ್ಛ ಮೈಸೂರು ಅಭಿಯಾನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.