ಮನೆ ಪ್ರಕೃತಿ ನಾಗರಹೊಳೆ: ರಾಷ್ಟ್ರೀಯ ಆನೆ ಗಣತಿಗೆ ಚಾಲನೆ

ನಾಗರಹೊಳೆ: ರಾಷ್ಟ್ರೀಯ ಆನೆ ಗಣತಿಗೆ ಚಾಲನೆ

0

ಹುಣಸೂರು: 648 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ನಾಗರಹೊಳೆ ಅರಣ್ಯದಲ್ಲಿ ರಾಷ್ಟ್ರೀಯ ಆನೆ ಗಣತಿ ಬುಧವಾರ ಆರಂಭವಾಗಿದ್ದು, ಮೂರು ದಿನ 500 ಚದರ ಕಿ.ಮೀ ವ್ಯಾಪ್ತಿಯಲ್ಲಿ ಗಣತಿ ನಡೆಯಲಿದೆ ಎಂದು ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

Join Our Whatsapp Group

ನಾಗರಹೊಳೆ ಅರಣ್ಯ ಸೇರಿ ಬಂಡೀಪುರ, ಬಿ.ಆರ್.ಹಿಲ್ಸ್ ಸೇರಿ ಪ್ರತಿ ರಾಷ್ಟ್ರೀಯ ಉದ್ಯಾನದಲ್ಲಿ 5 ವರ್ಷಕ್ಕೊಮ್ಮೆ ಆನೆ ಗಣತಿ ನಡೆಯುತ್ತದೆ. 2017ರಲ್ಲಿ ನಡೆದ ಗಣತಿಯಲ್ಲಿ ರಾಜ್ಯದಲ್ಲಿ 6,049 ಆನೆಗಳಿರುವುದು ದಾಖಲಾಗಿತ್ತು ಎಂದರು.

ನಾಗರಹೊಳೆಯ 91 ಗಸ್ತುಗಳಲ್ಲಿ ನಡೆಯುವ ಗಣತಿ ಕಾರ್ಯದಲ್ಲಿ ಹುಲಿ ಯೋಜನೆಗೆ ಸೇರಿದ ಇಲಾಖೆಯ 300 ಸಿಬ್ಬಂದಿ ಭಾಗವಹಿಸುತ್ತಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ಈ ಬಾರಿ ಸ್ವಯಂ ಸೇವಕರನ್ನು ನಿಯೋಜಿಸಿಲ್ಲ ಎಂದರು.

ಆನೆ ಗಣತಿ ಕಾರ್ಯವನ್ನು ಮೂರು ಹಂತದಲ್ಲಿ ನಡೆಸಲಿದ್ದು, ಮೊದಲ ದಿನ ‘ಬ್ಲಾಕ್ ಕೌಂಟ್’ ಮೂಲಕ ನೇರ ಗಣತಿ. ಎರಡನೇ ದಿನ ಪರೋಕ್ಷ ಗಣತಿ (ಲದ್ದಿ ಮಾದರಿ ಎಣಿಕೆ), ಮೂರನೇ ದಿನ ಕೆರೆ ಕಟ್ಟೆ ಬಳಸಿ ಎಣಿಕೆ ನಡೆಸಲಾಗುವುದು. ಎಣಿಕೆ ಕಾರ್ಯಗಳಿಗೆ ನಿಗದಿತ ವ್ಯಾಪ್ತಿ ಗುರುತಿಸಲಾಗಿದೆ. ನಾಗರಹೊಳೆ ವ್ಯಾಪ್ತಿಯಲ್ಲಿ ಶೇ 50ರಷ್ಟು ಭೂ ಪ್ರದೇಶ ಅಥವಾ 5 ಚ.ಕಿ.ಮೀ ಪ್ರದೇಶದಲ್ಲಿ ಕನಿಷ್ಠ 15 ಕಿ.ಮೀ. ಕಾಲ್ನಡಿಗೆಯಲ್ಲಿ ಗಣತಿ ಸಿಬ್ಬಂದಿ ಸುತ್ತಾಡಿ ಅರಣ್ಯದಲ್ಲಿ ಕಾಣಿಸುವ ಆನೆಯ ಗುರುತುಗಳನ್ನು ನಿಗದಿತ ದಾಖಲೆ ಪ್ರಕಾರ ದಾಖಲಿಸಬೇಕು. ಎರಡನೇ ದಿನ ಕನಿಷ್ಠ 2 ಕಿ.ಮೀ. ವ್ಯಾಪ್ತಿಯಲ್ಲಿ ಪರೋಕ್ಷವಾಗಿ ಆನೆ ಲದ್ದಿ ಸಂಗ್ರಹಿಸಿ ವೈಜ್ಞಾನಿಕವಾಗಿ ದಾಖಲಿಸುವ ಕ್ರಮ ಅನುಸರಿಸಲಾಗುವುದು. ಮೂರನೇ ದಿನ ಅರಣ್ಯದೊಳಗಿನ ಕೆರೆ–ಕಟ್ಟೆ, ನೀರಿನ ಹೊಂಡಗಳ ಬಳಿ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆವರೆಗೆ ಮೊಕ್ಕಾಂ ಹೂಡಿ ಸ್ಥಳಕ್ಕೆ ಬರುವ ಆನೆಗಳ ಗಣತಿ ನಡೆಸಲಿದ್ದಾರೆ. ಈ ಗಣತಿಯಲ್ಲಿ ಹುಲಿ ಯೋಜನೆಗೆ ಸೇರಿದ ಇಲಾಖೆಯ 300 ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ದಾಂಡೇಲಿ ಮತ್ತು ಮೈಸೂರು ವಿಭಾಗ ಅರಣ್ಯ ಪ್ರದೇಶವಿದೆ. ಮೈಸೂರು ವಿಭಾಗ ವ್ಯಾಪ್ತಿಯಲ್ಲಿರುವ ನಾಗರಹೊಳೆ, ಬಿ.ಆರ್.ಹಿಲ್ಸ್, ಬಂಡೀಪುರ ಸೇರಿ 10 ಸಂರಕ್ಷಿತ ಅರಣ್ಯ ಪ್ರದೇಶಗಳು, ಕೇರಳದ ವೈನಾಡು ಅರಣ್ಯ ಆನೆಗಳಿಗೆ ಸುರಕ್ಷಿತ ತಾಣಗಳಾಗಿವೆ. ಇದು ಆಹಾರ ಭದ್ರತೆಯನ್ನೂ ಒದಗಿಸುವ ಹರಿಧ್ವರ್ಣದ ಕಾಡುಗಳಾಗಿವೆ ಎಂದು ಹರ್ಷಕುಮಾರ್ ಮಾಹಿತಿ ನೀಡಿದರು.

ಹಿಂದಿನ ಲೇಖನಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ: ಭಗೀರಥ ಉಪ್ಪಾರ ಸಂಘ
ಮುಂದಿನ ಲೇಖನಬಿಡುವೇನೇನಯ್ಯ ಹನುಮ ನಿನ್ನಾ