ಮನೆ ಮನರಂಜನೆ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಬೇಡ : ಹೈಕೋರ್ಟ್

ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಬೇಡ : ಹೈಕೋರ್ಟ್

0

ಬೆಂಗಳೂರು: ಪ್ರಸಿದ್ಧ ಗಾಯಕ ಸೋನು ನಿಗಮ್ ವಿರುದ್ಧದ ಪ್ರಕರಣದಲ್ಲಿ ಹೊಸ ತಿರುವು ಕಂಡಿದ್ದು, ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಕನ್ನಡ ಹಾಡು ಹಾಡಿ ಎಂದಿದ್ದಕ್ಕಾಗಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ಐಆರ್ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಸೋನು ನಿಗಮ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ.

ಹಳ್ಳಿ ಮಟ್ಟದ ಸಂಗೀತ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರು “ಕನ್ನಡ ಹಾಡು ಹಾಡಿ” ಎಂದು ಕೇಳಿದ ಸಂದರ್ಭದಲ್ಲಿ, ಸೋನು ನಿಗಮ್ ಅವರು ಪಹಲ್ಗಾಮ್ ದಾಳಿಗೆ ಈ ಘಟನೆಯನ್ನು ಹೋಲಿಸಿ ನೀಡಿದ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಯಿತು. ಈ ಹೇಳಿಕೆಯನ್ನು ಅವಹೇಳನಕಾರಿಯಾಗಿ ಪರಿಗಣಿಸಿ ಎಫ್‌ಐಆರ್ ದಾಖಲಾಗಿತ್ತು.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಸೋನು ನಿಗಮ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯ ವೇಳೆ, ರಾಜ್ಯ ಸರ್ಕಾರದ ವಿಶೇಷ ಸಾರ್ವಜನಿಕ ವಕೀಲರು ಗಾಯಕ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಿದರು.

ಬಗ್ಗೆ ಪ್ರತಿಕ್ರಿಯಿಸಿರುವ ಸೋನು ನಿಗಮ್ ಪರ ವಕೀಲರು, “ಬೆಂಗಳೂರುಗೆ ಹಾಜರಾಗುವುದರಿಂದ ತೀವ್ರ ಭದ್ರತಾ ಸಮಸ್ಯೆ ಉಂಟಾಗಬಹುದು” ಎಂದು ಚಿಂತೆ ವ್ಯಕ್ತಪಡಿಸಿದರು. ಹೀಗಾಗಿ, ವಿಚಾರಣೆಗೆ ಫಿಸಿಕಲ್ ಹಾಜರಾತಿಗೆ ಬದಲು, ವಿಡಿಯೋ ಕಾನ್ಫರೆನ್ಸ್ ಮೂಲಕ ಅಥವಾ ಅವರಿರುವ ಸ್ಥಳದಲ್ಲಿಯೇ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.

ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಪೀಠ ಈ ಪ್ರಕರಣದಲ್ಲಿ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದೆ: ಗಾಯಕನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಸೋನು ನಿಗಮ್ ವೆಚ್ಚದಲ್ಲಿ ಅವರಿದ್ದ ಸ್ಥಳದಲ್ಲಿಯೇ ತನಿಖೆ ನಡೆಸಬಹುದು. ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆಗೆ ಅವಕಾಶ ನೀಡಬಹುದು. ಹೈಕೋರ್ಟ್ ಅನುಮತಿ ಇಲ್ಲದೆ ದೋಷಾರೋಪ ಪಟ್ಟಿ ಸಲ್ಲಿಸಬಾರದು.

ಈ ಆದೇಶದೊಂದಿಗೆ ಸೋನು ನಿಗಮ್ ತಾತ್ಕಾಲಿಕವಾಗಿ ಬಲವಂತದ ಕಾನೂನು ಕ್ರಮದಿಂದ ಮುಕ್ತರಾಗಿದ್ದಾರೆ. ಆದರೆ ಪ್ರಕರಣ ಇನ್ನೂ ಅಂತಿಮವಾಗಿಲ್ಲ.