ಬೆಂಗಳೂರು: ನಾಲ್ಕು ಸಾರಿಗೆ ನಿಗಮಗಳ ನೌಕರರ ಮೂಲ ವೇತನವನ್ನು ಶೇ25ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದರೂ ಸರ್ಕಾರ ಏಕಪಕ್ಷೀಯವಾಗಿ ಶೇ 12.5ರಷ್ಟು ಹೆಚ್ಚಳದ ನಿರ್ಧಾರ ಮಾಡಿದೆ ಎಂದು ಆರೋಪಿಸಿರುವ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್್ರ ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಸಭೆಯ ವಿವರನ್ನು ಜಂಟಿ ಕ್ರಿಯಾ ಸಮಿತಿಯ ಜ್ಯೋತಿ ಅನಂತಸುಬ್ಬರಾವ್, ವಿಜಯ ಭಾಸ್ಕರ ಡಿ.ಎ., ಬಿ. ಜಯದೇವರಾಜೇ ಅರಸು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರಿ ನೌಕರರಿಗೆ ನಾಲ್ಕು ವರ್ಷಗಳ ಹಿಂದೆಯೇ 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ 27.5ರಷ್ಟು ವೇತನ ಹೆಚ್ಚಿಸಿರುವ ರಾಜ್ಯ ಸರ್ಕಾರವು ಸಾರಿಗೆ ನೌಕರರ ವಿಷಯದಲ್ಲಿ ತಾರತಮ್ಯದ ನಿಲುವು ತಳೆದಿದೆ. ಕಳೆದ ಫೆಬ್ರುವರಿ 18ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ತಿದ್ದುಪಡಿ ಮಾಡಿ 2025ರ ಜನವರಿ 1ರ ಬದಲು 2024ರ ಜ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೂ ಸರ್ಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆ ಚಾಲ್ತಿಯಲ್ಲಿರುವ ಕೈಗಾರಿಕಾ ಒಪ್ಪಂದಗಳ ಪ್ರಕಾರ 2022ರಲ್ಲಿದ್ದ ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು, ವಾರ್ಷಿಕ ಬಡ್ತಿಯನ್ನು 2024ರ ಜ.25ರ ಬೇಡಿಕೆಯ ಪಟ್ಟಿಯಲ್ಲಿ ಇರುವಂತೆ ಹೆಚ್ಚಿಸಿ, ವೇತನ ಶ್ರೇಣಿ ರಚಿಸಬೇಕು. 2024ರಿಂದ ನಾಲ್ಕು ವರ್ಷಗಳಿಗೆ ಅನ್ವಯವಾಗುವಂತೆ ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕು. ಬಾಟಾ ಮತ್ತಿತರ ಭತ್ಯೆಗಳನ್ನು ಹೆಚ್ಚಿಸಬೇಕು. 12 ತಿಂಗಳ ಬಾಕಿ ಹಣವನ್ನು ಕರ್ತವ್ಯದಲ್ಲಿರುವವರಿಗೂ ನಿವೃತ್ತರಿಗೂ ಪಾವತಿಸ ಬೇಕು. 26 ತಿಂಗಳ ಬಾಕಿ ಹಣ ₹1,272 ಕೋಟಿಯನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಒತ್ತಾಯಿಸಿದರು. ಮೇ 20ರಿಂದ ಮುಷ್ಕರ ನಡೆಸಲು ಕರೆ ನೀಡಲಾಗಿದ್ದು, ಈ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಮೇ 15ಕ್ಕೆ ಮಧ್ಯಾಹ್ನ 3ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು ಎನ್ನಲಾಗಿದೆ.

















