ಮನೆ ಸುದ್ದಿ ಜಾಲ ನಾಲ್ವರು ಒಂದೇ ಕುಟುಂಬದ ಸದಸ್ಯರ ಭೀಕರ ಕೊಲೆ

ನಾಲ್ವರು ಒಂದೇ ಕುಟುಂಬದ ಸದಸ್ಯರ ಭೀಕರ ಕೊಲೆ

0

ಜಂಜ್‌ಗೀರ್-ಚಂಪಾ (ಛತ್ತೀಸ್‌ಗಢ) : ಯಾರೋ ದುಷ್ಕರ್ಮಿಗಳು ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಹರಿತವಾದ ಆಯುಧದಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ನಡೆದಿದೆ. ಮೇದಿನಿ ಪ್ರಸಾದ್ ಕಶ್ಯಪ್ (65), ಅವರ ಪತ್ನಿ ಶಾಂತಿ ಬಾಯಿ (62), ಮೊಮ್ಮಗ ಪಿತಾಂಬರ್ ಕಶ್ಯಪ್ (17) ಮತ್ತು ಮೊಮ್ಮಗಳು ಕುಮಾರಿ ಮೊಗ್ರಾ (13) ಮೃತ ದುರ್ದೈವಿಗಳು. ಶಿವ್ರಿನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಭನ್​ತ್ವಾರಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ವೃದ್ಧ ದಂಪತಿ ಮತ್ತು ಅವರ ಅಪ್ರಾಪ್ತ ಮೊಮ್ಮಕ್ಕಳನ್ನು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿದ್ದಲ್ಲದೇ ಕೆಲವು ಮಾಹಿತಿ ಕಲೆ ಹಾಕಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಕಶ್ಯಪ್ ಹೇಳಿದ್ದಾರೆ. ಶ್ವಾನ ದಳದ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಸ್ಥಳದಲ್ಲಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಹರಿತವಾದ ಆಯುಧಗಳನ್ನು ಬಳಸಿ ಈ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬರುತ್ತಿರುವುದಾಗಿ ಅವರು ಹೇಳಿದರು. ಬುಧವಾರ ರಾತ್ರಿ ಊಟ ಮಾಡಿದ ಬಳಿಕ ನಿರ್ಮಾಣ ಹಂತದ ಮನೆಯಲ್ಲಿ ನಾಲ್ವರು ಮಲಗಿದ್ದರು. ಆದರೆ, ಗುರುವಾರ ಬೆಳಗ್ಗೆ ನಾಲ್ವರೂ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಗ್ರಾಮಸ್ಥರು ತಕ್ಷಣ ಶಿವರಿನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪ್ರಕರಣದ ಪ್ರತಿಯೊಂದು ಅಂಶವನ್ನು ಕಲೆ ಹಾಕುತ್ತಿದ್ದಾರೆ ಎಂದು ಕಶ್ಯಪ್ ಹೇಳಿದ್ದಾರೆ ಎನ್ನಲಾಗಿದೆ.