ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಕರ್ನಾಟಕ ಕಲಾಮಂದಿರದಲ್ಲಿ ಸಂಜೆ 5 ಗಂಟೆಗೆ ವಿವಿಧ ಕಲಾತಂಡಗಳಿoದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್ ಅವರು ತಿಳಿಸಿದರು.
ಇಂದು ಹಳೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಉಪ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಕಲಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಅಂದು ಸಂಜೆ 5 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ಸುಮಾರು 6 ರಿಂದ 8 ತಂಡದ 230 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ತಂಡಕ್ಕೆ ನೆನಪಿನ ಕಾಣಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳನ್ನೊಳಗೊಡಂತೆ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜವರೇಗೌಡ, ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿ ಸೇರಿದಂತೆ ನೆಹರು ಯುವ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.