ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುರುಷ ಸಿಬ್ಬಂದಿಯೊಬ್ಬರು ಶೌಚಾಲಯದೊಳಗೆ ಮಹಿಳೆಯ ಫೋಟೊ ಅಥವಾ ವಿಡಿಯೋ ಸೆರೆಹಿಡಿಯಲು ಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ 36 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸರ್ಜಾಪುರ ರಸ್ತೆ ಭಾಗದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮೇ 21 ರಂದು ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ.ಪೊಲೀಸರ ಪ್ರಕಾರ, ಮಹಿಳೆ ಶೌಚಾಲಯ ಬಳಸುತ್ತಿದ್ದ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅನುಮಾನಾಸ್ಪದವಾಗಿ ನಡೆದುಕೊಂಡಿದ್ದು, ಮೊಬೈಲ್ ಫೋನ್ ಮೂಲಕ ಫೋಟೊ ತೆಗೆಯಲು ಅಥವಾ ವಿಡಿಯೋ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಶೌಚಾಲಯದೊಳಗಿದ್ದ ವೇಳೆ ತನ್ನ ಫೋಟೊ ಅಥವಾ ವಿಡಿಯೋಗಳನ್ನು ಆರೋಪಿ ಸೆರೆಹಿಡಿದಿರಬಹುದೆಂಬ ಗಂಭೀರ ಅನುಮಾನ ವ್ಯಕ್ತಪಡಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಮಹಿಳೆ ತಕ್ಷಣವೇ ಆತನನ್ನು ಪ್ರಶ್ನಿಸಿದಾಗ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ತಾನು ಗರ್ಭಿಣಿಯಾಗಿರುವ ಕಾರಣ ಈ ಘಟನೆ ತನ್ನ ಮೇಲೆ ತೀವ್ರ ಮಾನಸಿಕ ಒತ್ತಡ, ಭಯ ಮತ್ತು ಅವಮಾನ ಉಂಟುಮಾಡಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದು, ಆರೋಪಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 77 ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ಉಂಟುಮಾಡುವ ಉದ್ದೇಶದ ಮಾತು ಅಥವಾ ಕೃತ್ಯ), ಸೆಕ್ಷನ್ 62 (ಅಪರಾಧಕ್ಕೆ ಯತ್ನ) ಹಾಗೂ ಐಟಿ ಕಾಯ್ದೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಮೊಬೈಲ್ ಫೋನ್ನಲ್ಲಿ ಯಾವುದೇ ಫೋಟೊ ಅಥವಾ ವಿಡಿಯೋ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಪ್ರಕರಣ ಸಂಬಂಧ ಆರೋಪಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

















