ಡೆಹ್ರಾಡೂನ್ ಬುಧವಾರ (ಮೇ 06) ವಿಪಕ್ಷ ನಾಯಕ ರಾಹುಲ್ ಗಾಂಧಿಯ ಅವರ ಹೆಸರನ್ನು ಹೇಳಿಕೊಂಡು ಟಿಕೆಟ್ ಆಕಾಂಕ್ಷಿಗಳು ಹಾಗೂ ರಾಜಕೀಯ ನಾಯಕರಿಗೆ ಮೋಸ ಮಾಡುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವೊಂದನ್ನು ಡೆಹ್ರಾಡೂನ್ ಪೊಲೀಸರು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಆಪರೇಷನ್ ಪ್ರಹಾರ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಂಜಾಬ್ನ ಅಮೃತಸರ ಮೂಲದ ಗೌರವ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತುದೆ. ಉತ್ತರಾಖಂಡದ ಕಾಂಗ್ರೆಸ್ ನಾಯಕಿ ಭಾವನಾ ಪಾಂಡೆ ಅವರು ಮೇ 3 ರಂದು ನೀಡಿದ ದೂರು ಈ ಹಗರಣದ ಮೂಲವನ್ನು ಪತ್ತೆಹಚ್ಚಲು ನೆರವಾಯಿತು ಎನ್ನಲಾಗಿದೆ.
ರಾಹುಲ್ ಗಾಂಧಿಯವರ ಸಹಾಯಕ ಕಾನೀಶ್ ಸಿಂಗ್ ಎಂದು ಹೇಳಿಕೊಂಡಿದ್ದ ಗೌರವ್ ಕುಮಾರ್, ಪಕ್ಷದೊಳಗೆ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ ಭಾವನಾ ಅವರಿಂದ 25 ಲಕ್ಷ ರೂಪಾಯಿ ಪಡೆದು ಫೋನ್ ಸ್ವಿಚ್ ಆಫ್ ಮಾಡಿದ್ದ. ವಿಶ್ವಾಸಾರ್ಹತೆ ಹೆಚ್ಚಿಸಲು ಟ್ರೂಕಾಲರ್ನಲ್ಲಿ ಕನಿಷ್ಕ್ ಸಿಂಗ್ ಎಂಬ ನಕಲಿ ಪ್ರೊಫೈಲ್ ಬಳಸುತ್ತಿದ್ದ. ರಾಜಕೀಯ ವೆಬ್ಸೈಟ್ಗಳಿಂದ ಉತ್ತರಾಖಂಡ, ರಾಜಸ್ಥಾನ ಮತ್ತು ಬಿಹಾರದ ಪ್ರಭಾವಿ ನಾಯಕರ ಮಾಹಿತಿಯನ್ನು ಕಲೆಹಾಕುತ್ತಿದ್ದ. ಹೈಕಮಾಂಡ್ನೊಂದಿಗೆ ನೇರ ಸಂಪರ್ಕವಿದೆ ಎಂದು ಬಿಂಬಿಸಿಕೊಂಡು, ಚುನಾವಣಾ ಟಿಕೆಟ್ ಅಥವಾ ಉನ್ನತ ಹುದ್ದೆಗಳ ಆಸೆ ತೋರಿಸಿ ಹಣ ಪಡೆಯುತ್ತಿದ್ದ ಎಂಬ ಮಾಹಿತಿಯ ಪ್ರಕಾರ ಪೊಲೀಸ್ ವಿಚಾರಣೆಯ ವೇಳೆ ಆರೋಪಿಯು ತನ್ನ ವಂಚನೆಯನ್ನು ಒಪ್ಪಿಕೊಂಡಿದ್ದಾನೆ. ಜೈಪುರದಲ್ಲಿ ಇಬ್ಬರು ರಾಜಕಾರಣಿಗಳಿಗೆ ಕ್ರಮವಾಗಿ 1.90 ಕೋಟಿ ರೂ. ಮತ್ತು 12 ಲಕ್ಷ ರೂ. ವಂಚನೆ ಮಾಡಿದ್ದಾನೆ. ಪಾಟ್ನಾ ಮೂಲದ ನಾಯಕನಿಂದ 3 ಲಕ್ಷ ರೂ. ಲೂಟಿ, ಡೆಹ್ರಾಡೂನ್ನ ಭಾವನಾ ಪಾಂಡೆ ಅವರಿಗೆ 25 ಲಕ್ಷ ರೂ. ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಹೀಗಾಗಿ ಡೆಹ್ರಾಡೂನ್ನ ಮಾಲ್ ಒಂದರಲ್ಲಿ ಮತ್ತೊಬ್ಬ ನಾಯಕನಿಂದ ಹಣ ಸಂಗ್ರಹಿಸಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಈತನನ್ನು ಸೆರೆಹಿಡಿದಿದ್ದಾರೆ. ಈತನೊಂದಿಗೆ ಚಜ್ಜು, ರಜತ್ ಮಾದ ಮತ್ತು ಮಣಿಂದರ್ ಸಿಂಗ್ ಎಂಬ ಸಹಚರರು ಕೂಡ ಕೆಲಸ ಮಾಡುತ್ತಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ. ಪ್ರತಿಷ್ಠೆಗೆ ಹೆದರಿ ಅನೇಕರು ಈತನ ವಿರುದ್ಧ ದೂರು ನೀಡಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಆರೋಪಿಯಿಂದ ಎರಡು ಫೋನ್ ಮತ್ತು ಡೇಟಾ ಡಾಂಗಲ್ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. ರಾಜಕೀಯ ಆಕಾಂಕ್ಷಿಗಳು ಇಂತಹ ವಂಚಕರ ಬಗ್ಗೆ ಜಾಗರೂಕರಾಗಿರಬೇಕೆಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.















