ನವದೆಹಲಿ: ನ್ಯಾಯಾಂಗ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬವನ್ನು ತಡೆಯುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.ವಿಚಾರಣೆ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ ನಂತರ ಮೂರು ತಿಂಗಳೊಳಗೆ ತೀರ್ಪು ಪ್ರಕಟಿಸಬೇಕು ಎಂದು ದೇಶದ ಎಲ್ಲಾ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ ಜಾಮೀನು ಅರ್ಜಿಗಳಂತಹ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದೆ.ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ತೀರ್ಪು ಪ್ರಕಟಿಸುವಲ್ಲಿ ವಿಳಂಬವಾದರೆ ಅರ್ಜಿದಾರರಿಗೆ ಸರಿಪಡಿಸಲಾಗದ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ ಎಂದು ಕೋರ್ಟ್ ಒತ್ತಿ ಹೇಳಿದೆ. ವಿಶೇಷವಾಗಿ ಜಾಮೀನು ಅರ್ಜಿಗಳನ್ನು ಸಾಧ್ಯವಾದರೆ ಅದೇ ದಿನವೇ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದೆ.ಯಾವುದೇ ಕಾರಣಕ್ಕೆ ಆದೇಶ ಕಾಯ್ದಿರಿಸಿದರೆ, ಮುಂದಿನ ದಿನದೊಳಗೆ ತೀರ್ಪು ಪ್ರಕಟಿಸಿ ಅಪ್ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಜಾಮೀನು ಮಂಜೂರು ಅಥವಾ ಶಿಕ್ಷೆ ಅಮಾನತು ಆದೇಶಗಳನ್ನು ಕೂಡ ತಕ್ಷಣವೇ ಜೈಲು ಅಧಿಕಾರಿಗಳಿಗೆ ರವಾನಿಸಬೇಕು ಎಂದು ಕೋರ್ಟ್ ಹೇಳಿದೆ. ಅದರಂತೆ ಆರೋಪಿತ ಅಥವಾ ಶಿಕ್ಷಿತ ವ್ಯಕ್ತಿಯನ್ನು ಸಾಧ್ಯವಾದರೆ ಅದೇ ದಿನ, ಇಲ್ಲವಾದರೆ ಮುಂದಿನ ದಿನ ಬಿಡುಗಡೆ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.


















