ಮನೆ ರಾಜ್ಯ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ಶೀಘ್ರವೇ ಆರಂಭ

ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ಶೀಘ್ರವೇ ಆರಂಭ

0

ಬೆಂಗಳೂರು (Bengaluru): ಮೆಟ್ರೊ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ಗಾಗಿ (ಟೋಕನ್‌) ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಬಿಎಂಆರ್‌ಸಿಎಲ್ ಮುಂದಾಗಿದೆ.

ನಿಲ್ದಾಣಗಳ ಕೌಂಟರ್‌ಗಳಲ್ಲಿ ಟೋಕನ್ ಪಡೆದು ಪ್ರಯಾಣಿಸುವವರು ಇನ್ನು ಮುಂದೆ ತಮ್ಮ ಮೊಬೈಲ್ ಫೋನ್‌ನಲ್ಲೇ ಕ್ಯೂಆರ್‌ ಕೋಡ್ ಟಿಕೆಟ್ ಪಡೆದುಕೊಳ್ಳಬಹುದು. ಈ ಸಂಬಂಧ ಪೇಟಿಎಂ ಜತೆ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿದೆ. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಈಗಾಗಲೇ ಎಲ್ಲಾ ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲು ಸ್ಕ್ಯಾನಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ. ಪ್ರಯಾಣ ಆರಂಭಿಸುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣಗಳನ್ನು ನಮೂದಿಸಿ ಪೇಟಿಎಂ ಮೂಲಕವೇ ಹಣ ಪಾವತಿಸಿದರೆ ಕ್ಯೂಆರ್ ಕೋಡ್ ಸೃಷ್ಟಿಯಾಗುತ್ತದೆ.

ಈ ಹೊಸ ಉಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಯಶಸ್ವಿಯಾದರೆ ಸೆಪ್ಟೆಂಬರ್ 15ರ ವೇಳೆಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವ್ಯವಸ್ಥೆಯಿಂದ ನಿಲ್ದಾಣಗಳ ಕೌಂಟರ್‌ಗಳಲ್ಲಿ ಟೋಕನ್ ಪಡೆದು ಪ್ರಯಾಣಿಸುವವರು ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಮನೆಯಲ್ಲೇ ಕುಳಿತು ಕ್ಯೂಆರ್‌ ಕೋಡ್ ಟಿಕೆಟ್ ಸಿದ್ಧಪಡಿಸಿಕೊಂಡು ಬಂದರೆ ಅದನ್ನು ನಿಲ್ದಾಣದ ಪ್ರವೇಶ ಗೇಟ್‌ನಲ್ಲಿ ಸ್ಕ್ಯಾನ್ ಮಾಡಿ ಒಳಹೋಗಬಹುದು. ಮನೆಯಲ್ಲಿ ಕುಳಿತು ಚಿತ್ರಮಂದಿರಗಳ ಟಿಕೆಟ್ ಖರೀದಿಸಿ ಸ್ಕ್ಯಾನ್ ಮಾಡಿ ಒಳಹೋಗುವ ಮಾದರಿಯಲ್ಲೇ ಮೆಟ್ರೊ ರೈಲು ಪ್ರಯಾಣಿಕರು ಟಿಕೆಟ್‌ಗಳನ್ನೂ ಖರೀದಿಸಬಹುದು ಎಂದು ವಿವರಿಸಿದರು.

ಸ್ಮಾರ್ಟ್ ಕಾರ್ಡ್‌ಗಳನ್ನು ಆ್ಯಪ್ ಮೂಲಕ ಮೊಬೈಲ್‌ ಫೋನ್‌ನಲ್ಲೇ ರೀಚಾರ್ಜ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ಇದೆ. ದಿನದ ಪಾಸ್‌ಗಳನ್ನು ಕ್ಯೂಆರ್‌ ಕೋಡ್ ಮೂಲಕವೇ ಖರೀದಿಸಲು ಅವಕಾಶ ಆಗುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಕೂಡ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಹಿಂದಿನ ಲೇಖನಥೈರಾಯ್ಡ್‌ ಸಮಸ್ಯೆ ಇರುವವರು ಮಾಡಬೇಕಾದ ಯೋಗಾಸನಗಳು
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ