ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರಿಗಿಂದು 40ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ದಿನಕ್ಕೆ ಅವರ ಮುಂದಿನ ಸಿನಿಮಾದ ಟೈಟಲ್ – ಟೀಸರ್ ರಿಲೀಸ್ ಮಾಡಿ ಫ್ಯಾನ್ಸ್‌ಗಳಿಗೆ ಸಖತ್ ಗಿಫ್ಟ್ ನೀಡಲಾಗಿದೆ.
ಬಹುಭಾಷಾ ನಟಿಯಾಗಿ ಸೌತ್ ಸಿನಿಮಾರಂಗದಲ್ಲಿ ಮಿಂಚಿರುವ ನಯನತಾರಾ ಇಂದು ಭಾರತೀಯ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ತಮ್ಮ ಅಭಿನಯದಿಂದಲೇ ಅಪಾರ ಅಭಿಮಾನಿ ವಲಯವನ್ನು ಸಂಪಾದಿಸಿರುವ ʼಅನ್ನಪೂರ್ಣಿʼಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ.
ತನ್ನ ಮುಂಬರುವ ಸಿನಿಮಾದ ಟೈಟಲ್ ಟೀಸರ್‌ನ್ನು ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲಾಗಿದೆ.
ಅಳುವ ಮಗುವನ್ನು ಸಂತೈಸುವ ತಾಯಿಯಾಗಿ, ದುಷ್ಟರ ಪಾಲಿಗೆ ದುಸ್ವಪ್ನವಾಗಿ ಕಾಣಿಸಿಕೊಂಡಿರುವ ಲುಕ್‌ನಲ್ಲಿ ನಯನತಾರಾ ಅವರ ಪಾತ್ರವನ್ನು ಪರಿಚಯಿಸಲಾಗಿದೆ.
ಕತ್ತಿಯನ್ನು ಹಿಡಿದು ತನ್ನ ಹಾಗೂ ಮಗುವಿಗೆ ತಂಟೆಗೆ ಬರುವ ದುಷ್ಟರ ಗುಂಪನ್ನು ಸಂಹಾರಗೈಯುವ ರೌದ್ರ ಅವತಾರದಲ್ಲಿ ನಯನತಾರಾ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೊಂದು ತಾಯಿ ಸೆಂಟಿಮೆಂಟ್‌ವುಳ್ಳ ಮಾಸ್ ಕಂಟೆಂಟ್ ಸಿನಿಮಾವಾಗಿದ್ದು, ರಕ್ಕಯಿ ಎನ್ನುವ ಟೈಟಲ್ ಇಡಲಾಗಿದೆ.
ಯುದ್ಧವನ್ನು ಘೋಷಿಸಿದ್ದಾಳೆ ಎನ್ನುವ ಟ್ಯಾಗ್‌ಲೈನ್ ಈ ಹಿಂದೆ ರಿಲೀಸ್ ಆದ ಪೋಸ್ಟರ್‌ನಲ್ಲಿ ಹಾಕಲಾಗಿತ್ತು. ಈಗ ಯುದ್ಧ ನಡೆಯುತ್ತಿದೆ ಎನ್ನು ಟ್ಯಾಗ್ ಲೈನ್ ಹಾಕಲಾಗಿದೆ.
ಮೇಲ್ನೋಟಕ್ಕೆ ಇದೊಂದು ಮಹಿಳಾ ಪ್ರಧಾನ ಸಿನಿಮಾದಂತೆ ಭಾಸವಾಗುತ್ತಿದ್ದು, ಸೆಂಥಿಲ್ ನಲ್ಲಸಾಮಿ ಅವರು ನಿರ್ದೇಶನ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ.
ʼNayanthara: Beyond The Fairy Taleʼ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಸೋಮವಾರ (ನ.18ರಂದು) ನೆಟ್ ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
ನಯನತಾರಾ ಮುಂದೆ ʼಮನ್ನಂಗಾಟಿ 1920ʼ, ʼಟೆಸ್ಟ್ʼ, ʼಡಿಯರ್ ಸ್ಟೊಡೆಂಟ್ಸ್ ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.