ಐಪಿಎಲ್-2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಇದರೊಂದಿಗೆ ಚೆನ್ನೈ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಚೆನ್ನೈಗೆ ಈ ಗೆಲುವು ಅಷ್ಟು ಸುಲಭವಾಗಿ ಸಿಗಲಿಲ್ಲ. ಕೊನೆಯವರೆಗೂ ಗೆಲುವಿಗಾಗಿ ಸೆಣಸಾಡಿದ ಚೆನ್ನೈ ಪರ ಆಲ್ರೌಂಡರ್ ರವೀಂದ್ರ ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ಜಯ ತಂದುಕೊಟ್ಟರು.
ಕೊನೆಯ ಓವರ್ ನಲ್ಲಿ ಚೆನ್ನೈಗೆ 13 ರನ್ ಅಗತ್ಯವಿತ್ತು. ಮೋಹಿತ್ ಶರ್ಮಾ ಕೊನೆಯ ಓವರ್ ಎಸೆಯುತ್ತಿದ್ದರು. ಮೊದಲ 4 ಎಸೆತಗಳನ್ನು ಅದ್ಭುತವಾಗಿ ಬೌಲಿಂಗ್ ಮಾಡಿದ ಮೋಹಿತ್ ಕೇವಲ 3 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇದಾದ ಬಳಿಕ ಕೊನೆಯ ಎರಡು ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 10 ರನ್‌ಗಳ ಅಗತ್ಯವಿತ್ತು. ಐದನೇ ಎಸೆತದಲ್ಲಿ ಸಿಕ್ಸರ್ ಹಾಗೂ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಜಡೇಜಾ ಚೆನ್ನೈಗೆ ಗೆಲುವು ತಂದುಕೊಟ್ಟರು.
ಗೆಲುವಿನ ಬಳಿಕ ಇಡೀ ಮೈದಾನವೇ ಹುಚ್ಚೆದ್ದು ಕುಣಿದಿತ್ತು. ಜಡೇಜಾ ಕೂಡ ತಂಡವನ್ನು ಗೆಲುವಿನ ದಡ ಸೇರಿಸಿದ ಬಳಿಕ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದರು. ಚೆನ್ನೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಜಡೇಜಾಗೆ ಇಡೀ ತಂಡವೇ ಸಲಾಂ ಹೊಡೆದಿತ್ತು. ಗೆಲುವಿನ ನಂತರ ಈ ಬಾರಿ ಚೆನ್ನೈ ತಂಡದೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದ ಅಜಯ್ ಮಂಡಲ್ ಗೆ ವಿಶೇಷ ಉಡುಗೊರೆ ನೀಡಿರುವ ಜಡೇಜಾ ಸಿಎಸ್ ಕೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ್ದ ತಮ್ಮ ಬ್ಯಾಟ್ ಅನ್ನು ಜಡೇಜಾ, ಅಜಯ್ ಮಂಡಲ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಅಜಯ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಜಡೇಜಾ ಉಡುಗೊರೆಯಾಗಿ ನೀಡಿದ ಬ್ಯಾಟ್‌ನ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅಜಯ್, ರವೀಂದ್ರ ಜಡೇಜಾ ಅವರು ಅಂತಿಮ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಬ್ಯಾಟ್ ಉಡುಗೊರೆಯಾಗಿ ನೀಡಿದ ಜಡೇಜಾಗೆ ಧನ್ಯವಾದ ಕೂಡ ಹೇಳಿದ್ದಾರೆ. ಅಲ್ಲದೆ ಜಡೇಜಾ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಅವಕಾಶ ನೀಡಿದ ಚೆನ್ನೈ ಫ್ರಾಂಚೈಸಿಗೆ ಧನ್ಯವಾದ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಜನಿಸಿದ ಅಜಯ್ ಮಂಡಲ್ ದೇಶೀಯ ಕ್ರಿಕೆಟ್ ನಲ್ಲಿ ಛತ್ತೀಸ್ ಗಢಕ್ಕಾಗಿ ಆಡುತ್ತಾರೆ. ಅಜಯ್ ಒಬ್ಬ ಆಲ್ ರೌಂಡರ್. ಅವರು ಎಡಗೈ ಸ್ಪಿನ್ನರ್ ಮತ್ತು ಎಡಗೈ ಬ್ಯಾಟ್ಸ್ ಮನ್. ಚೆನ್ನೈ ಈ ಸೀಸನ್ನಲ್ಲಿ 20 ಲಕ್ಷ ರೂ.ಗಳ ಮೂಲ ಬೆಲೆಗೆ ಅಜಯ್ ಅವರನ್ನು ಖರೀದಿಸಿತ್ತು. ಆದರೆ ಅಜಯ್ಗೆ ಈ ಸೀಸನ್ ನಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ.