ಮನೆ ಸುದ್ದಿ ಜಾಲ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಇನ್ನು ಕಡ್ಡಾಯ..!

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಇನ್ನು ಕಡ್ಡಾಯ..!

0

ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಮತ್ತು ಅವರನ್ನು ಇತ್ತೀಚಿನ ಸುದ್ದಿಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಲು, ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದನ್ನು ಕಡ್ಡಾಯಗೊಳಿಸಿದೆ. ಈ ಕುರಿತು ಇಲಾಖೆಯು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ.

ಪ್ರಾರ್ಥನೆ ಮುಗಿದ ತಕ್ಷಣ, ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ದಿನಪತ್ರಿಕೆಗಳನ್ನು ಓದಿಸುವುದು ಕಡ್ಡಾಯವಾಗಿದೆ. ಈ ನಿಯಮವು ರಾಜ್ಯದ ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ವಸತಿ ಶಾಲೆಗಳು ಸೇರಿದಂತೆ ಎಲ್ಲಾ ರೀತಿಯ ಶಾಲೆಗಳಿಗೂ ಅನ್ವಯವಾಗುತ್ತದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಮಾಡಿತ್ತು. ಆಯೋಗದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆಯು, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಆದೇಶ ಹೊರಡಿಸಿದೆ.

ಈಗಾಗಲೇ ಹಲವು ಶಾಲೆಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ನ್ಯೂಸ್ ಪೇಪರ್ ಓದಿಸುವ ಅಭ್ಯಾಸವಿತ್ತು. ಆದರೆ, ಇನ್ನು ಮುಂದೆ ಪ್ರಾರ್ಥನೆಯ ನಂತರದ 10-15 ನಿಮಿಷಗಳನ್ನು ಪ್ರತ್ಯೇಕವಾಗಿ ಪತ್ರಿಕೆ ಓದುವುದಕ್ಕಾಗಿಯೇ ಮೀಸಲಿಡಬೇಕು ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಈ ನಿರ್ಧಾರವು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಕ್ಕಳನ್ನು ಮೊಬೈಲ್ ಫೋನ್‌ಗಳ ವಿಪರೀತ ಬಳಕೆಯಿಂದ ದೂರವಿಡುವುದು ಮತ್ತು ಓದುವ ಹವ್ಯಾಸವನ್ನು ಬೆಳೆಸುವುದು. ಪ್ರಸ್ತುತ ವಿದ್ಯಮಾನಗಳು ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು. ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಸಿದ್ಧಗೊಳಿಸಲು ಇದು ನೆರವಾಗುತ್ತದೆ.