ಮನೆ ರಾಜ್ಯ ಇಂದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

ಇಂದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 8 ಶಾಸಕರು

0

ಬೆಂಗಳೂರು: ಇನ್ನು ಕೆಲವೇ ಹೊತ್ತಿನಲ್ಲಿ ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Join Our Whatsapp Group

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ರಾಜ್ಯದ ಸಿಎಂ ಆಗಿ ಎರಡನೇ ಬಾರಿ ಸಿದ್ದರಾಮಯ್ಯ ಹಾಗೂ ಮೊದಲ ಬಾರಿ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ . ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಇಬ್ಬರೂ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

10 ಮಂದಿ ಪ್ರಮಾಣವಚನ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಇಂದು 8 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಂ.ಬಿ. ಪಾಟೀಲ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವೇದಿಕೆ ಮೇಲೆ 30 ಗಣ್ಯರಿಗೆ ಅವಕಾಶ: ವೇದಿಕೆ ಮೇಲೆ 30 ಗಣ್ಯರು ಮಾತ್ರ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮುಂಭಾಗ ಶಾಸಕರು, ಶಾಸಕರ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದೆ. ವಿವಿಐಪಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಮಧ್ಯಭಾಗದಲ್ಲಿ ಸುಮಾರು 40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸ್ಟೇಡಿಯಂ ಗ್ಯಾಲರಿಯಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಒಳಭಾಗದಲ್ಲಿ ಹತ್ತು ಬೃಹತ್ ಎಲ್ ಇಡಿ ಅಳವಡಿಸಲಾಗಿದ್ದು, ಸ್ಟೇಡಿಯಂ ಹೊರಗಡೆಯೂ ಎಲ್ ಇಡಿ ಪರದೆ ಅಳವಡಿಕೆ ಮಾಡಲಾಗಿದೆ.

ಸಿಇಟಿ ವಿದ್ಯಾರ್ಥಿಗಳಿಗೆ ಸೂಚನೆ: ಇಂದು ಸಿಇಟಿ ಪರೀಕ್ಷೆ ಸಮಯದಲ್ಲಿಯೇ ಸಿಎಂ-ಡಿಸಿಎಂ ಪ್ರಮಾಣ ವಚನ ಕಾರ್ಯಕ್ರಮ ಇರುವುದರಿಂದ ಅಭ್ಯರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದೆಂದು ಮತ್ತು ಕೊನೆಗಳಿಗೆಯಲ್ಲಿ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಳ್ಳಬಾರದೆಂದು ಬೆಳಗ್ಗೆ 9.30ರೊಳಗೆ ಪರೀಕ್ಷಾ ಕೇಂದ್ರಗಳಿಗೆ ತಲುಪುವಂತೆ ಸೂಚಿಸಲಾಗಿದೆ.

ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿ: ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದು ಪರೀಕ್ಷಾ ಕೇಂದ್ರಗಳಿಗೆ ತೆರಳುವವರು ಮುಂಚಿತವಾಗಿ ತೆರಳಲು ಟ್ವೀಟ್ ಮೂಲಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಸಹಾಯ ಬೇಕಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಹಿಂದಿನ ಲೇಖನನೌಕಾಪಡೆಯಲ್ಲಿ 372 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಖ್ಯಾತ ನೇತ್ರ ತಜ್ಞ ಡಾಕ್ಟರ್ ಭುಜಂಗ ಶೆಟ್ಟಿ ನಿಧನ