ನವದೆಹಲಿ : ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಹಿಳಾ ಮೀಸಲಾತಿ ಸ್ವಾಗತಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಮಹಿಳಾ ಮೀಸಲಾತಿ ಕುರಿತು ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೂ ಮೊದಲು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ‘ದೇಶವು ಮಹಿಳೆಯರ ಸಬಲೀಕರಣದಲ್ಲಿ ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ’ ಎಂದು ತಿಳಿಸಿದ್ದಾರೆ.
ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನಮ್ಮ ದೇಶವು ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ ಇಡಲಿದೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನೀಡುವ ಗೌರವವು ರಾಷ್ಟ್ರಕ್ಕೆ ನೀಡುವ ಗೌರವವಾಗಿದೆ ಎಂದು ಮೋದಿ ಬರೆದುಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ಅಜ್ಞಾನವನ್ನು ಹೋಗಲಾಡಿಸುವಲ್ಲಿ ಮತ್ತು ಸಮಾಜವನ್ನು ಜ್ಞಾನದಿಂದ ಬೆಳಗಿಸುವಲ್ಲಿ ಮಹಿಳೆಯರ ಪಾತ್ರವನ್ನು ಎತ್ತಿ ತೋರಿಸುವ ಸಂಸ್ಕೃತ ಶ್ಲೋಕವನ್ನೂ ಮೋದಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 16 ರಿಂದ 18 ರವರೆಗೆ ನಡೆಯಲಿರುವ ವಿಶೇಷ ಅಧಿವೇಶನವು 2029 ರ ಸಾರ್ವತ್ರಿಕ ಚುನಾವಣೆಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರಲು ತಿದ್ದುಪಡಿಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.















