ಮನೆ ರಾಜ್ಯ ಶಾಸಕ ಎಂ.ಶ್ರೀನಿವಾಸ್‌ಗೆ ಟಿಕೆಟ್ ನೀಡಿದಾಗ ಎಷ್ಟು ಹಣ ಕೊಟ್ಟಿದ್ದರು ಬಹಿರಂಗಪಡಿಸಲಿ: ಹೆಚ್.ಡಿ.ಕುಮಾರಸ್ವಾಮಿ ಸವಾಲು

ಶಾಸಕ ಎಂ.ಶ್ರೀನಿವಾಸ್‌ಗೆ ಟಿಕೆಟ್ ನೀಡಿದಾಗ ಎಷ್ಟು ಹಣ ಕೊಟ್ಟಿದ್ದರು ಬಹಿರಂಗಪಡಿಸಲಿ: ಹೆಚ್.ಡಿ.ಕುಮಾರಸ್ವಾಮಿ ಸವಾಲು

0

ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಣಕ್ಕೆ ಮಾರಾಟವಾಗಿದೆ ಎಂದು ಆರೋಪಿಸಿರುವ ಶಾಸಕ ಎಂ.ಶ್ರೀನಿವಾಸ್‌ಗೆ ಪಕ್ಷ ನಾಲ್ಕು ಬಾರಿ ಟಿಕೆಟ್ ನೀಡಿದೆ. ಆಗೆಲ್ಲಾ ಶ್ರೀನಿವಾಸ್ ಅವರು ಎಷ್ಟು ಹಣ ಕೊಟ್ಟಿದ್ದರು ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

Join Our Whatsapp Group

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು (ಕಲ್ಲು ಕಟ್ಟಡ) ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಪರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶ್ರೀನಿವಾಸ್ ಅವರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿ ಬೇರೆಯವರಿಗೆ ಟಿಕೆಟ್ ಕೊಡೋಣ.ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರೂ ಹೇಳುತ್ತಿದ್ದಾರೆ. ಶ್ರೀನಿವಾಸ್ ಅವರನ್ನು ಗೌರವದಿಂದ ನಡೆಸಿಕೊಳ್ಳುವ ಸಲುವಾಗಿ ಮೊದಲ ಪಟ್ಟಿಯಲ್ಲಿ ಹೆಸರು ಘೋಷಿಸಿದ್ದೆ. ಆನಂತರದಲ್ಲಿ ನಿಮ್ಮ ಕೈಗೇ ಬಿ-ಫಾರಂ ಕೊಡುತ್ತೇನೆ.ನೀವು ಸೂಚಿಸುವ ಅಭ್ಯರ್ಥಿಗೇ ಟಿಕೆಟ್ ಕೊಡುವುದಾಗಿಯೂ ಹೇಳಿದ್ದೆ. ಆದರೆ, ಅವರು ತಮಗೆ ಮತ್ತು ತಮ್ಮ ಅಳಿಯನಿಗಷ್ಟೇ ಸೀಮಿತವಾಗಿ ಟಿಕೆಟ್ ಕೇಳಿದ್ದರಿಂದ ಬಿ.ಆರ್.ರಾಮಚಂದ್ರುಗೆ ಟಿಕೆಟ್ ನೀಡಲಾಯಿತು ಎಂದರು.

ಪಕ್ಷದಿಂದ ಹೊರಹೋಗಿ ಪಕ್ಷೇತರ ಅಭ್ಯರ್ಥಿಯಾಗಿರುವ ವಿಜಯಾನಂದಗೆ ಒಂದು ವರ್ಷದ ಹಿಂದೆಯೇ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದೆ. ಆದರೆ, ಆತ ಈಗಲೇ ನನ್ನ ಹೆಸರು ಘೋಷಿಸುವುದು ಬೇಡ.ಶ್ರೀನಿವಾಸ್ ಅವರ ಮನವೊಲಿಸುತ್ತೇನೆ. ಚುನಾವಣೆ ಸಮೀಪಿಸಿದಾಗ ನನ್ನ ಹೆಸರು ಘೋಷಿಸುವಂತೆ ಕೇಳಿಕೊಂಡಿದ್ದರು. ಅದಕ್ಕೇ ನಾನೂ ಸುಮ್ಮನಾಗಿದ್ದೆ.ಈಗ ಜೆಡಿಎಸ್ ಟಿಕೆಟ್ ಮಾರಾಟವಾಗಿದೆ ಎಂದು ಹೇಳುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷವನ್ನು ಸೋಲಿಸಲು ಕೇಂದ್ರದ ಬಿಜೆಪಿ ಘಟಾನುಘಟಿ ನಾಯಕರೆಲ್ಲಾ ಮಂಡ್ಯಕ್ಕೆ ಬಂದು ಹೋಗುತ್ತಿದ್ದಾರೆ. ರೈತರು ಆತ್ಮ ಹತ್ಯೆ ಮಾಡಿಕೊಂಡಾಗ, ಭಾರೀ ಮಳೆ ಬಂದು ಹಾನಿಯಾದಾಗ ಇವರೆಲ್ಲಾ ಎಲ್ಲಿದ್ದರು. ಒಬ್ಬ ರೈತ ಕುಟುಂಬದ ಕಣ್ಣೀರು ಒರೆಸಲು ಬರಲಿಲ್ಲ. ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಒಬ್ಬರಾದ ಮೇಲೊಬ್ಬರಂತೆ ಇಲ್ಲಿಗೆ ದಾಳಿ ಇಡುತ್ತಿದ್ದಾರೆ. ಅವರಿಂದ ಜಿಲ್ಲೆಗೆ ಯಾವುದೇ ಉಪಯೋಗವಿಲ್ಲ. ಆತ್ಮಹತ್ಯೆಗೆ ಶರಣಾದ ಕುಟುಂಬದ ಕಣ್ಣೀರು ಒರೆಸಿದ್ದು ನಾವು.ಅವರ ಬದುಕಿಗೆ ರಕ್ಷಣೆ ದೊರಕಿಸಿದ್ದು ನಾವು.ನಮಗೆ ಮಾತ್ರ ಮತ ಕೇಳುವ ನೈತಿಕತೆ ಇದೆ. ಬಿಜೆಪಿಯವರಿಗೆ ಜಿಲ್ಲೆಯ ಜನರ ಮತ ಕೇಳುವ ನೈತಿಕತೆ ಇಲ್ಲ ಎಂದು ದೂರಿದರು.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಏಳಕ್ಕೆ ಏಳು ಸ್ಥಾನಗಳಲ್ಲೂ ಜೆಡಿಎಸ್ ಪಕ್ಷವನ್ನು  ಗೆಲ್ಲಿಸಿದ್ದೀರಿ. ಈಗಲೂ ಅದೇ ಮಾದರಿಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನನ್ನನ್ನು ಮುಖ್ಯಮಂತ್ರಿ ಮಾಡಿ. ನಾನು ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಜಿಲ್ಲೆಯ ಅಭಿವೃದ್ಧಿಗೆ ೮ ಸಾವಿರ ಕೋಟಿ ರು. ಹಣ ಘೋಷಿಸಿದ್ದೆ. ಆದರೆ, ಉದ್ದೇಶಿತ ಯೋಜನೆಗಳು ಜಾರಿಯಾಗುವ ಮುನ್ನವೇ ಸರ್ಕಾರವನ್ನು ಉರುಳಿಸಿದರು. ನಂತರ ಬಂದ ಬಿಜೆಪಿ ಸರ್ಕಾರ ಆ ಅನುದಾನವನ್ನೆಲ್ಲಾ ಹಿಂಪಡೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡಿತು ಎಂದು ದೂರಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಕುತಂತ್ರಕ್ಕೆ ಜಿಲ್ಲೆಯ ಜನರು ಮಾರುವಾಗದೆ ಮಂಡ್ಯ ಜಿಲ್ಲೆಯ ಜನರು ಪ್ರೀತಿಗೆ ಬೆಲೆ ಕೊಡುವವರು ಆದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಬೆಂಬಲಿಸಿ ಎಂದು ಹೇಳಿದರು.

ರೈತರ ಬದುಕು,ಯುವಕರಿಗೆ ಉದ್ಯೋಗ,ತಾಯಂದಿರ ನೆಮ್ಮದಿ ಬದುಕಿಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ.ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗ ನಾಡಿನ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ, ಜನತೆಯ ಹಣ ಲೂಟಿ ಮಾಡಿಲ್ಲ ಎಂದು ಹೇಳಿದರು.

 ರಾಜ್ಯದಲ್ಲಿ ಕನ್ನಡಿಗರ ಸರ್ಕಾರ ತರಲು ಹೊರಟಿದ್ದೇನೆ. ಸಾಮಾನ್ಯ ಹಳ್ಳಿಯ ರೈತನ ಸೂಚನೆ ಮೇರೆಗೆ ಸರ್ಕಾರ ನಡೆಯಬೇಕು ಎಂದರು.

ಮಂಡ್ಯ ಜಿಲ್ಲೆಗೆ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರು ದಾಳಿ ಹಾಕುತ್ತಿದ್ದಾರೆ. ದೇವೇಗೌಡರ ಕೊನೆ ಉಸಿರು ಇರುವವರೆಗೂ ಮಂಡ್ಯ ಜಿಲ್ಲೆಯ ಜನತೆಯನ್ನು ಮರೆಯುವುದಿಲ್ಲ.ಜಿಲ್ಲೆಯ ಜನ ಜೆಡಿಎಸ್ ಗೆ ಕೊಟ್ಟ ಶಕ್ತಿಯನ್ನು ಇಂದಿಗೂ ಮರೆಯುವುದಿಲ್ಲ  ಎಂದರು.

ಸಭೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು,ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್,ನಗರ ಘಟಕದ ಅಧ್ಯಕ್ಷ ಎಸ್.ಪಿ.ಗೌರೀಶ್,ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ,ಪರಿಶಿಷ್ಟ ಜಾತಿ ಜಿಲ್ಲಾಧ್ಯಕ್ಷ ಜಯರಾಮ್ ಸೇರಿದಂತೆ ಇತರರಿದ್ದರು.