ಕಾರವಾರ/ಅಂಕೋಲಾ (ಮೇ.30): ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಹೆದ್ದಾರಿಯಲ್ಲೇ ಪಲ್ಟಿಯಾಗಿದ್ದು, ಪರಿಣಾಮವಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ಪ್ರವಾಸಿಗರನ್ನು ಹೊತ್ತು ಗೋವಾಕ್ಕೆ ತೆರಳುತ್ತಿದ್ದ ‘ಸೀಬರ್ಡ್’ ಸಂಸ್ಥೆಗೆ ಸೇರಿದ ಬಸ್, ರಾಷ್ಟ್ರೀಯ ಹೆದ್ದಾರಿ 52 ರ ಅಂಕೋಲಾ – ಯಲ್ಲಾಪುರ ರಸ್ತೆಯ ಕಂಚಿನಬಾಗಿಲು ತಲುಪುತ್ತಿದ್ದಂತೆ ಈ ದುರಂತ ಸಂಭವಿಸಿದೆ. ಅತಿವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ನೇರ ಕಾರಣ ಎನ್ನಲಾಗುತ್ತಿದ್ದು, ಬಸ್ಸು ಹೆದ್ದಾರಿಗೆ ಸಂಪೂರ್ಣವಾಗಿ ಅಡ್ಡಲಾಗಿ ಪಲ್ಟಿಯಾಗಿದೆ. ದುರಂತದ ಸಮಯದಲ್ಲಿ ಬಸ್‌ನಲ್ಲಿ ಒಟ್ಟು 36 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಬಸ್ ಪಲ್ಟಿಯಾದ ಭೀಕರತೆಗೆ ಆಂಧ್ರಪ್ರದೇಶ ಮೂಲದ ಶರಣಯ್ಯ (42) ಎಂಬ ಪ್ರಯಾಣಿಕರು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಬಸ್‌ನಲ್ಲಿದ್ದ ಉಳಿದ 36 ಪ್ರಯಾಣಿಕರ ಪೈಕಿ 20 ಜನರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ತಕ್ಷಣವೇ ಎಲ್ಲ ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕಲ್ಪಿಸಲಾಗಿದೆ. ಭಾರೀ ಗಾತ್ರದ ಸೀಬರ್ಡ್ ಬಸ್ ರಾಷ್ಟ್ರೀಯ ಹೆದ್ದಾರಿ 52 ರ ಮಧ್ಯದಲ್ಲೇ ಅಡ್ಡವಾಗಿ ಬಿದ್ದಿದ್ದರಿಂದ ಅಂಕೋಲಾ-ಯಲ್ಲಾಪುರ ರಸ್ತೆಯ ಸಂಪೂರ್ಣ ವಾಹನ ಸಂಚಾರ ಗಂಟೆಗಟ್ಟಲೆ ಸ್ಥಗಿತಗೊಂಡಿತ್ತು. ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಭೀಕರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಕ್ರೇನ್ ಬಳಸಿ ಬಸ್ಸನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿ, ಟ್ರಾಫಿಕ್ ಸುಗಮಗೊಳಿಸಲು ಹರಸಾಹಸ ಪಟ್ಟರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ.


















