ಟೆನಿಸ್ ದಿಗ್ಗಜೆ ಸೆರೆನಾ ವಿಲಿಯಮ್ಸ್ ನಾಲ್ಕು ವರ್ಷಗಳ ನಿವೃತ್ತಿಯ ನಂತರ ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್ ಕ್ವೀನ್ಸ್ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ನಡೆಯುವ ಮಹಿಳಾ ಡಬಲ್ಸ್ ಸ್ಪರ್ಧೆಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ. ಈ ಕಾರ್ಯಕ್ರಮ ಜೂನ್ 6 ರಿಂದ ಜೂನ್ 21 ರವರೆಗೆ ನಡೆಯಲಿದೆ. ಸೆರೆನಾ ಕೊನೆಯದಾಗಿ 2022ರ ಯುಎಸ್ ಓಪನ್‌ನಲ್ಲಿ ವೃತ್ತಿಪರ ಟೆನಿಸ್ ಆಡಿದ್ದರು. ಡಿಸೆಂಬರ್‌ನಲ್ಲಿ ವಿಲಿಯಮ್ಸ್ ಡೋಪಿಂಗ್ ಪರೀಕ್ಷೆಯಲ್ಲಿ ಭಾಗವಹಿಸುವುದನ್ನು ಪ್ರಾರಂಭಿಸಿದ್ದಾರೆ ಎಂದು ಬಹಿರಂಗ ಪಡಿಸಿದಾಗಿನಿಂದ ಅವರು ಟೆನಿಸ್ಗೆ ಮರಳುವಿಕೆ ಸುದ್ದಿಯಲ್ಲಿದೆ ಎನ್ನಲಾಗುತ್ತಿದೆ.

ನಿವೃತ್ತಿ ಬಳಿಕ ಮತ್ತೆ ಕ್ರೀಡೆಗೆ ಮರಳಲು ಬಯಸುವ ಯಾವುದೇ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಸೆರೆನಾ ಸದ್ಯ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ. ಸೆರೆನಾ 2017ರಲ್ಲಿ ಮೊದಲ ಮಗಳು ಒಲಿಂಪಿಯಾಗೆ ಜನ್ಮ ನೀಡಿದ್ದರು ಎನ್ನಲಾಗುತ್ತಿದೆ. ಈ ಕುರಿತು ಅವರ ಎರಡನೇ ಮಗಳು ಆದಿರಾ 2023ರಲ್ಲಿ ಜನಿಸಿದರು. 44 ವರ್ಷದ ಸೆರೆನಾ ವಿಲಿಯಮ್ಸ್ ಕೆನಡಾದ ಉದಯೋನ್ಮುಖ ತಾರೆ ವಿಕ್ಟೋರಿಯಾ ಎಂಬೊಕೊ ಅವರೊಂದಿಗೆ ಡಬಲ್ಸ್ ಪಂದ್ಯದಲ್ಲಿ ಆಡಲಿದ್ದಾರೆ. ಹಸಿರು ಅಂಕಣಗಳಲ್ಲಿ ಅವರ ದೀರ್ಘ ಮತ್ತು ಯಶಸ್ವಿ ಇತಿಹಾಸದಿಂದಾಗಿ ಕ್ವೀನ್ಸ್ ಕ್ಲಬ್ ಅವರ ಪುನರಾಗಮನಕ್ಕೆ ಸೂಕ್ತ ಸ್ಥಳವಾಗಿದೆ ಎಂದು ವಿಲಿಯಮ್ಸ್ ಹೇಳಿದರು. ಟೆನಿಸ್ ಇತಿಹಾಸದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ‘ವೃತ್ತಿಜೀವನದ ಗೋಲ್ಡನ್ ಸ್ಲಾಮ್’ ಪೂರ್ಣಗೊಳಿಸಿದ ಏಕೈಕ ಟೆನಿಸ್ ಆಟಗಾರ್ತಿ ಸೆರೆನಾ ಆಗಿದ್ದಾರೆ.

ಅವರು ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮತ್ತು ಎರಡೂ ಸ್ಪರ್ಧೆಗಳಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸೆರೆನಾ ವಿಲಿಯಮ್ಸ್ ಸಿಂಗಲ್ಸ್‌ನಲ್ಲಿ 23 ಗ್ರ್ಯಾಂಡ್ ಸ್ಲಾಮ್‌ಗಳು ಮತ್ತು ಡಬಲ್ಸ್‌ನಲ್ಲಿ 14 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಅವರು ಮಿಶ್ರ ಡಬಲ್ಸ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದಾರೆ. ಸೆರೆನಾ ಒಲಿಂಪಿಕ್ಸ್‌ನಲ್ಲಿ ಒಂದು ಸಿಂಗಲ್ಸ್ ಮತ್ತು ಮೂರು ಡಬಲ್ಸ್ ಚಿನ್ನದ ಪದಕಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
















