ಮನೆ ಸುದ್ದಿ ಜಾಲ ಆರೋಗ್ಯ ಸೇವೆಗೆ ತೊಡಕಾದ ನೌಕರರ ಕೊರತೆ – ಹುದ್ದೆ ಖಾಲಿ, ಪ್ಯಾರಾ ಮೆಡಿಕಲ್‌ ಸೇವೆಗೂ ಹಿನ್ನಡೆ..!

ಆರೋಗ್ಯ ಸೇವೆಗೆ ತೊಡಕಾದ ನೌಕರರ ಕೊರತೆ – ಹುದ್ದೆ ಖಾಲಿ, ಪ್ಯಾರಾ ಮೆಡಿಕಲ್‌ ಸೇವೆಗೂ ಹಿನ್ನಡೆ..!

0

ಮೈಸೂರು : ಆರೋಗ್ಯ ಇಲಾಖೆಯಲ್ಲಿ ಶೇ. 40ಕ್ಕಿಂತ ಅಧಿಕ ಕಾಯಂ ಸಿಬ್ಬಂದಿ ಕೊರತೆ ಇದ್ದು, ಆರೋಗ್ಯ ಸೇವೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಮೈಸೂರಿನಲ್ಲಿ ಎಂಎಂಸಿ ಅಡಿಯಲ್ಲಿ ಐದು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ. ಇದಲ್ಲದೇ ಜಯದೇವ ಹೃದ್ರೋಗ ಆಸ್ಪತ್ರೆ ಇದೆ. ಇದಲ್ಲದೇ ಎಂಡೊ ಕ್ರೊನಾಲಜಿ, ಯೂರಾಲಜಿ ಆಸ್ಪತ್ರೆಗಳು ಶೀಘ್ರವೇ ಹೊಸದಾಗಿ ಆರಂಭವಾಗಲಿವೆ. ತನ್ಮೂಲಕ ಮೈಸೂರು ನಗರ ಎಲ್ಲಾ ಸೇವೆಗಳನ್ನು ಹೊಂದಿರುವ ಮೆಡಿಕಲ್‌ ಹಬ್‌ ಆಗಿ ಹೊರ ಹೊಮ್ಮಿದೆ.

ಸರ್ಕಾರಿ ವ್ಯವಸ್ಥೆಯಡಿ ನಗರ ಕೇಂದ್ರದಲ್ಲಿ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ಸಿಗುತ್ತಿದೆ. ಇದು ನಗರ ಕೇಂದ್ರದಲ್ಲಾದರೆ ಗ್ರಾಮೀಣ, ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಕಾಯಂ ಸರಕಾರಿ ನೌಕರರ ಕೊರತೆ ಇರುವುದರಿಂದ ಒಟ್ಟು ಇಲಾಖೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಧಕ್ಕೆಯಾಗಿದೆ.

ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ 2,549 ಕಾಯಂ ಹುದ್ದೆಗೆ ಮಂಜೂರಾತಿ ಇದ್ದು, 1,462 ಮಂದಿ ಕೆಲಸ ಮಾಡುತ್ತಿದ್ದಾರೆ. 1099 ಹುದ್ದೆ ಖಾಲಿ ಇವೆ. ಅದೇ ರೀತಿ ರಾಷ್ಟ್ರೀಯ ಆರೋಗ್ಯ ಮಷಿನ್‌ ಯೋಜನೆಯಡಿ 880 ಮಂಜೂರಾತಿ ಹುದ್ದೆಗೆ 817 ಮಂದಿ ಕೆಲಸ ಮಾಡುತ್ತಿದ್ದು, 63 ಹುದ್ದೆ ಖಾಲಿ ಇವೆ. ಎನ್‌ಎಚ್‌ಎಂ ನಡಿ ನೇಮಕಗೊಂಡಿರುವ ಸಿಬ್ಬಂದಿ ಬಳಕೆ ಮಾಡಿಕೊಳ್ಳುವುದು, ಸಿಬ್ಬಂದಿ ಕಡಿಮೆ ಇರುವ ಜಾಗಕ್ಕೆ ಕಡಿಮೆ ಸಿಬ್ಬಂದಿ ನಿರ್ವಹಣೆ ಮಾಡಲು ಸಾಧ್ಯವಿರುವ ಕಡೆಯಿಂದ ವರ್ಗಾವಣೆ ಮಾಡಿಕೊಳ್ಳುವುದು, ಪರಸ್ಪರ ವರ್ಗಾವಣೆ ಮಾಡುವುದು ಸೇರಿದಂತೆ ಇನ್ನಿತರ ಆಡಳಿತಾತ್ಮಕ ಬದಲಾವಣೆ ಮಾಡಲಾಗುತ್ತಿದೆ.

ಸರ್ಕಾರದಿಂದ ಮಂಜೂರಾತಿ ಇರುವಷ್ಟು ಹುದ್ದೆಗಳು ಭರ್ತಿಯಾದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಆರೋಗ್ಯಾಧಿಕಾರಿ ಡಾ.ಪಿ.ಸಿ ಕುಮಾರಸ್ವಾಮಿ ವಿಜಯ ಕರ್ನಾಟಕಕ್ಕೆ ತಿಳಿಸಿದರು. ಜಿಲ್ಲೆಯಲ್ಲಿ ಗ್ರಾಮಾಂತರ, ತಾಲೂಕು, ಜಿಲ್ಲಾ, ನಗರ ಮಟ್ಟದ ಸರಕಾರಿ ಆಸ್ಪತ್ರೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಕಾಯಂ ವೈದ್ಯರ ಅವಶ್ಯಕತೆ ಇದೆ.

ಆದರೆ, ಕಾಯಂ ಎಂಬಿಬಿಎಸ್‌, ತುರ್ತು ಚಿಕಿತ್ಸೆ ವೈದ್ಯರು, ದಂತ ವೈದ್ಯಾಧಿಕಾರಿಗಳು, ತಜ್ಞರು ಸೇರಿದಂತೆ ಒಟ್ಟು 38 ಕಾಯಂ ತಜ್ಞ ವೈದ್ಯರ ಕೊರತೆ ಇದೆ. ಇದು ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡುವಲ್ಲಿ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಜಿಲ್ಲೆಯಲ್ಲಿ ಕಾಯಂ ಶುಶ್ರೂಷಕರು, ಫಾರ್ಮಸಿ ಅಧಿಕಾರಿಗಳು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಲಿಪಿಕ ನೌಕರರು, ನೇತ್ರ ಸಹಾಯಕ ಅಧಿಕಾರಿಗಳನ್ನು ಒಳಗೊಂಡ ಪ್ಯಾರಾ ಮೆಡಿಕಲ್‌ ವಿಭಾಗದಲ್ಲಿ 166 ಕಾಯಂ ಹುದ್ದೆ ಖಾಲಿ ಇವೆ. ಹೀಗಾಗಿ ಆರೋಗ್ಯ ಸೇವೆಯಲ್ಲಿ ಪ್ಯಾರಾ ಮೆಡಿಕಲ್‌ ವಿಭಾಗಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ.

]ಕ್ಷೇತ್ರ ಕಾರ್ಯ ಸಿಬ್ಬಂದಿ ವಿಭಾಗದಲ್ಲಿ ಪಿಎಚ್‌ಸಿಒ, ಎಚ್‌ಐಒ, ಗ್ರೂಪ್‌-ಡಿ ಒಳಗೊಂಡಂತೆ ಒಟ್ಟು 1398 ಮಂಜೂರಾತಿ ಕ್ಷೇತ್ರ ಕಾರ್ಯ ಅಧಿಕಾರಿಗಳ ಹುದ್ದೆಗಳಿದ್ದು ಕೇವಲ 515 ಮಂದಿ ಕೆಲಸ ಮಾಡುತ್ತಿದ್ದು, 883 ಕಾಯಂ ಹುದ್ದೆಗಳು ಖಾಲಿ ಇವೆ. ಹೀಗಾಗಿ ಆರೋಗ್ಯ ಇಲಾಖೆಯ ಕ್ಷೇತ್ರ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಕೆಲವೊಂದು ಮಾರ್ಪಾಡಿನೊಂದಿಗೆ ಇರುವ ಸಿಬ್ಬಂದಿ ಹಾಗೂ ಎನ್‌ಎಚ್‌ಎಂ ಮಾನವ ಸಂಪನ್ಮೂಲವನ್ನೇ ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಯಾವುದೇ ತೊಂದರೆ ಆಗದಂತೆ ಆರೋಗ್ಯ ಸೇವೆ ತಲುಪಿಸುತ್ತಿದ್ದೇವೆ. ಹಾಗಾಗಿ ಸಿಬ್ಬಂದಿ ಕೊರತೆ ಇಲಾಖೆಯ ಕಾರ್ಯವೈಖರಿ ಮೇಲೆ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎನ್ನಲಾಗಿದೆ.