ಕೋಲ್ಕತ್ತಾ : ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಇದೀಗ ಟಿಎಂಸಿ ಹಿರಿಯ ನಾಯಕ ಕುನಾಲ್ ಘೋಷ್ ಅವರು ರಾಹುಲ್ ಗಾಂಧಿ ವಿರುದ್ಧ ಅತ್ಯಂತ ಗಂಭೀರ ಮತ್ತು ವ್ಯಂಗ್ಯಭರಿತ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕೋಲ್ಕತ್ತಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುನಾಲ್ ಘೋಷ್ ರಾಹುಲ್ ಗಾಂಧಿ ಅವರ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸಿದರು. ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಬಿಹಾರದಂತಹ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯ ವಿಜಯಯಾತ್ರೆಯನ್ನು ತಡೆಯುವ ಜವಾಬ್ದಾರಿ ರಾಹುಲ್ ಗಾಂಧಿ ಮೇಲಿತ್ತು. ಆದರೆ ಅವರು ಅಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಈಗ ಪಶ್ಚಿಮ ಬಂಗಾಳಕ್ಕೆ ಬಂದು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಘೋಷ್ ದೂರಿದರು.
ಟಿಎಂಸಿ ಬಲವಾಗಿರುವ ಕ್ಷೇತ್ರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡುತ್ತಿರುವುದರ ಹಿಂದೆ ಸಂಚಿದೆ ಎಂದು ಘೋಷ್ ಆರೋಪಿಸಿದರು. ರಾಹುಲ್ ಗಾಂಧಿ ಪಶ್ಚಿಮ ಬಂಗಾಳಕ್ಕೆ ಬರುವುದು ಕೇವಲ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಲು ಮಾತ್ರ. ಆ ಮೂಲಕ ಅವರು ನೇರವಾಗಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ಟಿಎಂಸಿ ವಿರೋಧಿ ಮತಗಳನ್ನು ಸೆಳೆಯುವ ಮೂಲಕ ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಕರೆಯುವುದನ್ನು ಕುನಾಲ್ ಘೋಷ್ ಸಮರ್ಥಿಸಿಕೊಂಡರು. ಬಿಜೆಪಿ ರಾಹುಲ್ ಗಾಂಧಿಯವರನ್ನು ʻಪಪ್ಪುʼ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸರಣಿ ರಾಜಕೀಯ ವೈಫಲ್ಯಗಳು ಮತ್ತು ಪ್ರಸ್ತುತ ನಡೆಯನ್ನು ನೋಡಿದರೆ ಆ ಹೆಸರು ಅವರಿಗೆ ಸಂಪೂರ್ಣವಾಗಿ ಸೂಕ್ತವಾಗಿದೆ ಎಂದು ಘೋಷ್ ವ್ಯಂಗ್ಯವಾಡಿದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತು ಟಿಎಂಸಿ ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ತೀವ್ರ ವಾಗ್ದಾಳಿ ನಡೆಸಿದ್ದರು.
ರಾಹುಲ್ ಅವರ ಈ ಹೇಳಿಕೆಗೆ ತಿರುಗೇಟು ನೀಡುವ ಭಾಗವಾಗಿ ಕುನಾಲ್ ಘೋಷ್ ಈ ಕಠಿಣ ಮಾತುಗಳನ್ನು ಆಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಈ ಬಹಿರಂಗ ಸಂಘರ್ಷವು ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏ.24 ರಂದು 152 ಸ್ಥಾನಗಳಲ್ಲಿ ಮೊದಲ ಹಂತದ ಚುನಾವಣೆ ನಡೆದರೆ ಏ.29ರಂದು 142 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ.















