ಮನೆ ಸುದ್ದಿ ಜಾಲ ಎಸ್.ಎಸ್.ಎಲ್.ಸಿ. ಫಲಿತಾಂಶ: ಜಿಲ್ಲೆಯ 6 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಎಸ್.ಎಸ್.ಎಲ್.ಸಿ. ಫಲಿತಾಂಶ: ಜಿಲ್ಲೆಯ 6 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

0

ಮೈಸೂರು (Mysuru)-ಎಸ್.ಎಸ್.ಎಲ್‌.ಸಿ. ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಆರು ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.

ಮೈಸೂರು ನಗರದ ಸರ್ಕಾರಿ ಆದರ್ಶ ಪ್ರೌಢಶಾಲೆಯ ಎಂ.ಜಿ.ಏಕತಾ, ಮರಿಮಲ್ಲಪ್ಪ ಪ್ರೌಢಶಾಲೆಯ ಚಾರುಕೀರ್ತಿ, ಸದ್ವಿದ್ಯ ಶಾಲೆಯ ಬಿ.ಎಸ್. ಅದಿತಿ, ಯಶಸ್ವಿನಿ ಅರಸ್, ನಂಜನಗೂಡು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಎಸ್. ದೇವಿಕಾ ಹಾಗೂ ಬನ್ನೂರಿನ ಆದಿಚುಂಚನಗಿರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂ. ದಿಶಾ ಶೇ.100ರಷ್ಟು ಅಂಕ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಹಾಗೆಯೇ ಜಿಲ್ಲೆಯ 13 ಮಕ್ಕಳು 624, 23 ಮಕ್ಕಳು 623, 23ಮಕ್ಕಳು 622, 22 ವಿದ್ಯಾರ್ಥಿಗಳು 621 ಹಾಗೂ 33 ಮಕ್ಕಳು 620 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಬಾಲಕಿಯರೇ ಮೇಲುಗೈ: ಜಿಲ್ಲೆಯಲ್ಲಿ 18028 ಹೆಣ್ಣು ಮಕ್ಕಳು ಹಾಗೂ 18100 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದು, ಕ್ರಮವಾಗಿ 16893 ಹೆಣ್ಣುಮಕ್ಕಳು ಮತ್ತು 16114 ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಹುಡುಗಿಯರು 93.73 ರಷ್ಟು ಫಲಿತಾಂಶ ಪಡೆದರೆ, ಹುಡುಗರು 89.02 ರಷ್ಟು ಶೇಕಡವಾರು ಪಡೆದಿದ್ದಾರೆ. ಜತೆಗೆ ಜಿಲ್ಲೆಯಲ್ಲಿ 625 ಅಂಕಗಳಿಗೆ 625 ಅಂಕ ಪಡೆದ 6 ಮಂದಿ ವಿದ್ಯಾರ್ಥಿಗಳೂ ಹೆಣ್ಣು ಮಕ್ಕಳೇ ಆಗಿರುವುದು ವಿಶೇಷ.

ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 36128 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದು, ಇವರಲ್ಲಿ 33012 ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲೆಗೆ ಶೇ.91.38 ರಷ್ಟು ಶೇಕಡವಾರು ಫಲಿತಾಂಶ ಲಭಿಸುವ ಮೂಲಕ ಎ ಗ್ರೇಡ್ ಲಭ್ಯವಾಗಿದೆ. ಜಿಲ್ಲೆಯಲ್ಲಿ 316 ವಿಶೇಷ ಚೇತನ ಮಕ್ಕಳು ಪರೀಕ್ಷೆ ಬರೆದಿದ್ದು ಇವರಲ್ಲಿ 255 ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.80.69  ರಷ್ಟು ಫಲಿತಾಂಶ ವಿಶೇಷ ಚೇತನ ಮಕ್ಕಳ ವಿಭಾಗದಿಂದ ಲಭ್ಯವಾಗಿದೆ.

ಶಾಲಾವಾರು ಮಾಹಿತಿ: ಜಿಲ್ಲೆಯಲ್ಲಿ 276 ಸರ್ಕಾರಿ ಪ್ರೌಢಶಾಲೆಯ 16125 ಮಕ್ಕಳಲ್ಲಿ 14493 ಮಂದಿ ಉತ್ತೀರ್ಣರಾಗಿದ್ದು ಶೇ.89.88 ಫಲಿತಾಂಶ ಬಂದಿದೆ. ಹಾಗೆಯೇ 134 ಅನುದಾನಿತ ಶಾಲೆಯಿಂದ 7742 ವಿದ್ಯಾರ್ಥಿಗಳಲ್ಲಿ 6997 ಮಂದಿ ಉತ್ತೀರ್ಣರಾಗಿದ್ದು ಶೇ.90.32ರಷ್ಟು ಫಲಿತಾಂಶ ಲಭಿಸಿದೆ. ಉಳಿದ 264 ಖಾಸಗಿ ಶಾಲೆಗಳಿಂದ 12256 ಮಕ್ಕಳಲ್ಲಿ 11522 ಮಕ್ಕಳು ಉತ್ತೀರ್ಣರಾಗಿದ್ದು ಶೇ.94.01 ರಷ್ಟು ಫಲಿತಾಂಶ ಬಂದಿದೆ.

ವಿಷಯವಾರು ಗರಿಷ್ಠ ಸಾಧನೆ: ಜಿಲ್ಲೆಯಲ್ಲಿ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕವನ್ನು 977 ಮಕ್ಕಳು ಪಡೆದಿದ್ದರೆ, ದ್ವಿತೀಯ ಭಾಷೆಯಲ್ಲಿ ಶೇ.100ರಷ್ಟು ಅಂಕವನ್ನು 429, ತೃತೀಯ ಭಾಷೆಯಲ್ಲಿ672, ಗಣಿತದಲ್ಲಿ 467, ವಿಜ್ಞಾನದಲ್ಲಿ238 ಹಾಗೂ ಸಮಾಜ ವಿಜ್ಞಾನದಲ್ಲಿ  1663 ಮಕ್ಕಳು ಶೇ.100ಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ. ಜತೆಗೆ ಕನ್ನಡ ಮಾಧ್ಯಮದಲ್ಲಿ ಶೇ.88.88 , ಆಂಗ್ಲ ಮಾಧ್ಯಮದಲ್ಲಿ 94.61 ಹಾಗೂ ಉರ್ದು ಮಾಧ್ಯಮದಲ್ಲಿ ಶೇ.69. 23 ಫಲಿತಾಂಶ ಲಭ್ಯವಾಗಿದೆ.

ಗ್ರಾಮೀಣ ಮಕ್ಕಳೇ ಮೇಲುಗೈ: ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ವಿಶೇಷವಾಗಿದೆ. ಗ್ರಾಮೀಣ ಭಾಗದ 19950 ಮಕ್ಕಳು ಪರೀಕ್ಷೆ ಬರೆದಿದ್ದು ಇವರಲ್ಲಿ 18527 ಮಂದಿ ಉತ್ತೀರ್ಣರಾಗಿದ್ದು, ಶೇ.92.87  ರಷ್ಟು ಫಲಿತಾಂಶ ಲಭ್ಯವಾಗಿದೆ. ಹಾಗೆಯೇ ನಗರ ಪ್ರದೇಶದ 16178 ಮಕ್ಕಳಲ್ಲಿ 14485 ಮಂದಿ ಉತ್ತೀರ್ಣರಾಗಿದ್ದು ಶೇ.89.54 ರಷ್ಟು ಫಲಿತಾಂಶ ಲಭ್ಯವಾಗಿದೆ. ಈ ಮೂಲಕ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚು ಉತ್ತೀರ್ಣರಾಗಿರುವುದು ವಿಶೇಷ.

ಪಿರಿಯಾಪಟ್ಟಣವೇ ಪ್ರಥಮ: ಜಿಲ್ಲೆಯ ತಾಲೂಕುವಾರು ಫಲಿತಾಂಶದಲ್ಲಿ ಪಿರಿಯಾಪಟ್ಟಣ ತಾಲೂಕು ಶೇ.94.64 ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಚ್.ಡಿ. ಕೋಟೆ ಶೇ.93.77, ಹುಣಸೂರು ಶೇ 93.64 , ಮೈಸೂರು ಗ್ರಾಮಾಂತರ ಶೇ.93.27 , ನಂಜನಗೂಡು ಶೇ.92.10 , ತಿ. ನರಸೀಪುರ ಶೇ.91.03 , ಮೈಸೂರು ಉತ್ತರ ಶೇ.89.07, ಮೈಸೂರು ದಕ್ಷಿಣ ಶೇ.88.67 ಹಾಗೂ ಕೆ.ಆರ್. ನಗರ ಶೇ. 87.35 ರಷ್ಟು ಫಲಿತಾಂಶ ಪಡೆಯುವ ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ.

ಹಿಂದಿನ ಲೇಖನಮಂಚೇನಹಳ್ಳಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಿ, ಚಿಕ್ಕಬಳ್ಳಾಪುರವನ್ನು ಸ್ಯಾಟ್‍ಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸಿ: ಕೇಂದ್ರಕ್ಕೆ ಸಚಿವ ಡಾ.ಕೆ.ಸುಧಾಕರ್‌ ಮನವಿ
ಮುಂದಿನ ಲೇಖನವರ್ಷಪೂರ್ತಿ ಏನು ಕೆಲಸ ಮಾಡುತ್ತೀರಾ?: ಬಿಬಿಎಂಪಿ ಅಧಿಕಾರಿಗಳಿಗೆ ಬೆಂಡೆತ್ತಿದ ಸಿಎಂ ಬೊಮ್ಮಾಯಿ