ಮನೆ ದೇವಸ್ಥಾನ ಸುತ್ತೂರು ಸೋಮೇಶ್ವರ ಸ್ವಾಮಿ ದೇವಾಲಯ

ಸುತ್ತೂರು ಸೋಮೇಶ್ವರ ಸ್ವಾಮಿ ದೇವಾಲಯ

0

ನಂಜನಗೂಡಿನಿಂದ 15 ಕಿಲೋ ಮೀಟರ್ ದೂರದಲ್ಲಿರುವ ಕ್ಷೇತ್ರವೇ ಸುತ್ತೂರು. ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮಿಗಳ ದೂರದರ್ಶಿತ್ವದ ಫಲವಾಗಿ ಸುತ್ತೂರು ವಿಶ್ವಾದ್ಯಂತ ಖ್ಯಾತಿ ಪಡೆದಿದೆ. ಸುತ್ತೂರು ಸಂಸ್ಥಾನ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೂ ಅನುಪಮ. ಸುತ್ತೂರು, ಮೈಸೂರು, ಬೆಂಗಳೂರು ಸೇರಿದಂತೆ ರಾಷ್ಟ್ರಾದ್ಯಂತ ಸುತ್ತೂರು ಮಠದ ಶಿಕ್ಷಣ ಸಂಸ್ಥೆಗಳಿವೆ.

ಸುತ್ತೂರು ಮಠವಿರುವ ಭೂಮಿ ಪರಮ ಪವಿತ್ರವೂ, ಶಕ್ತಿಯುತವೂ ಆಗಿದೆ.  ಹಿಂದೆ ಈ ಊರಿಗೆ ಶ್ರೋತ್ರಿಯೂರು ಎಂಬ ಹೆಸರಿತ್ತು ಎಂದು ಚೋಳರ ಶಾಸನ ಸಾರುತ್ತದೆ. ವಿಜಯನಗರದರಸರ ಕಾಲದ ಹೊತ್ತಿಗೇ ಈ ಊರು ಸುತ್ತೂರು ಆಗಿತ್ತು ಎಂಬದಕ್ಕೂ ದಾಖಲೆಗಳಿವೆ.

ಹೊಯ್ಸಳರ ಕಾಲದಲ್ಲಿ ಇಲ್ಲಿ ಸೋಮೇಶ್ವರಸ್ವಾಮಿ ದೇವಾಲಯ ನಿರ್ಮಿಸಲಾಗಿದೆ. ಹೊಯ್ಸಳರ ಒಂದನೆ ನರಸಿಂಹನ ದಂಡನಾಯಕನಾಗಿದ್ದ ಲಕ್ಷ್ಮಯ್ಯ 1169ರಲ್ಲಿ ಸುತ್ತೂರನ್ನು ತನ್ನ ಆಡಳಿತ ಕೇಂದ್ರ ಮಾಡಿಕೊಂಡಿದ್ದ. ಆತನೆ ಇಲ್ಲಿ ಈ ಸುಂದರವಾದ ಸೋಮೇಶ್ವರ ದೇವಾಲಯ ಕಟ್ಟಿಸಿದ ಎಂದು ತಿಳಿದುಬರುತ್ತದೆ.

ಈ ದೇವಾಲಯ ಎಲ್ಲ ಹೊಯ್ಸಳ ದೇವಾಲಯಗಳ ರೀತಿ ನಕ್ಷತ್ರಾಕಾರದ ಜಗಲಿಯ ಮೇಲಿಲ್ಲ. ಬದಲಾಗಿ ಸಂಪೂರ್ಣ ದ್ರಾವಿಡ ಶೈಲಿಯಲ್ಲಿದೆ. ಶಿಥಿಲವಾಗಿದ್ದ ದೇವಾಲಯವನ್ನು ಇತ್ತೀಚಗೆ ಸಂಪೂರ್ಣ ಜೀರ್ಣೋದ್ಧಾರ ಮಾಡಲಾಗಿದೆ. ಕಲ್ಲಿನಿಂದಲೇ ಆವರಣಗೋಡೆ ನಿರ್ಮಿಸಿ ರಕ್ಷಿಸಲಾಗಿದೆ.

ಸಾಮಾನ್ಯ ಕಡುಗಲ್ಲಿನ ಗೋಡೆ ಹಾಗೂ ಕಂಬಗಳ ದೇವಾಲಯ ಇದಾಗಿದ್ದು, ಪ್ರವೇಶದ್ವಾರಕ್ಕೆ ಸುಂದರ ಗೋಪುರವಿದೆ. ಗಾರೆಯ ಗೋಪುರದಲ್ಲಿ ಶಿವ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ ಮೊದಲಾದ ಶಿಲ್ಪಗಳಿವೆ. ದೇಗುಲದ ಎದುರು ನಂದಿಕಂಬವಿದೆ. ಈ ಕಂಬಕ್ಕೆ ಹಿತ್ತಾಳೆಯ ತಗಡು ಹೊದಿಸಲಾಗಿದ್ದು, ಕಂಬದಲ್ಲಿ ಪಾರ್ವತಿ ಪರಮೇಶ್ವರ, ಗಣಪತಿಯೇ ಮೊದಲಾದ ಉಬ್ಬುಶಿಲ್ಪಗಳಿವೆ. ದೇವಾಲಯದ ಗರ್ಭಗೃಹಕ್ಕೆ ನೇರವಾಗಿ ನಂದಿ ಧ್ವಜದ ಬಳಿ ಸುಂದರವಾದ ಬಸವಣ್ಣನ ವಿಗ್ರಹವಿದೆ.

ದೇವಾಲಯ ಒಳ ಪ್ರಾಕಾರದ ಪ್ರವೇಶದ ಎಡಕಂಬದಲ್ಲಿ ಗಣಪತಿಯ ಉಬ್ಬು ಶಿಲ್ಪವಿದ್ದು, ದೇವಾಲಯದಲ್ಲಿ ಮೊದಲಿಗೆ ಪ್ರಥಮ ವಂದಿತ ಗಣಪನ ದರ್ಶನವಾಗುತ್ತದೆ. ದೇವಾಲಯದ ಒಳಗೆ ಲೇತ್ ನಲ್ಲಿ ತಿರುಗಿಸಿ ಮಾಡಿದ ನುಣುಪಾದ ವರ್ತುಲಾಕಾರದ ಕಲಾತ್ಮಕ ಕಂಬಗಳಿಂದ ಕೂಡಿದ ಮಂಟಪವಿದೆ. ಗರ್ಭಗೃಹದ ಬಾಗಿಲವಾಡದ ಮೇಲೆ ಶಿವಪಾರ್ವತಿಯರ ಶಿಲ್ಪವಿದೆ. ಎಡ ಬಲದಲ್ಲಿ ಬೃಹದಾಕಾರದ ದ್ವಾರಪಾಲಕರ ಶಿಲ್ಪಗಳಿವೆ.

 ದೇವಾಲಯದ ಪ್ರಧಾನ ಗರ್ಭಗುಡಿಗಳಲ್ಲಿ ಸುಂದರವಾದ 5 ಅಡಿ ಎತ್ತರದ ಶಿವಲಿಂಗವಿದೆ. ದೇವಾಲಯದ ಪ್ರಾಕಾರದಲ್ಲಿ ಹಲವು ಪುಟ್ಟ ಗುಡಿಗಳಿದ್ದು, ಇದರಲ್ಲಿ ವೀರಭದ್ರ, ದಕ್ಷಿಣಾಮೂರ್ತಿ, ಬ್ರಹ್ಮ, ವಿಷ್ಣು, ಸೂರ್ಯ, ಷಣ್ಮುಖ, ಗಣಪತಿ, ಪಾರ್ವತಿಯೇ ಮೊದಲಾದ ದೇವಾನು ದೇವತೆಗಳ ಸುಂದರ ಕಲಾತ್ಮಕ ವಿಗ್ರಹಗಳಿವೆ.

ಪ್ರಕಾರದಲ್ಲಿರುವ ಹರಿಹರೇಶ್ವರ ಮೂರ್ತಿಯಂತೂ ಮನಮೋಹಕವಾಗಿದೆ. ಹಿಂದೆ ಈ ವಿಗ್ರಹ ಪ್ರಧಾನಗರ್ಭ ಗೃಹದಲ್ಲಿ ಶಿವಲಿಂಗದ ಬಳಿಯೇ ಇತ್ತು ಎಂದು ಹಿರಿಯರು ಹೇಳುತ್ತಾರೆ.  ಮೂರಡಿ ಪೀಠದ ಮೇಲೆ ಇರುವ ಹರಿರೇಶ್ವರ ವಿಗ್ರಹ ಸೂಕ್ಷ್ಮಕೆತ್ತನೆಯಿಂದ ಕೂಡಿದೆ. ಹರಿ ಹರ ವಿಗ್ರಹದ ಬಲಗೈಯಲ್ಲಿ ತ್ರಿಶೂಲವಿದ್ದರೆ, ಎಡಗೈನಲ್ಲಿ ಚಕ್ರವಿದೆ. ಅಭಯ ಮುದ್ರೆಯಲ್ಲಿರುವ ಹರನ ಕೈಯಲ್ಲಿ ಜಪಮಾಲೆಯಿದೆ. ವಿಗ್ರಹದ ಕೆಳಗೆ ಬಲಭಾಗದಲ್ಲಿ ಪಾರ್ವತಿ ಹಾಗೂ ಎಡಭಾಗದಲ್ಲಿ  ಲಕ್ಷ್ಮಿಯ ವಿಗ್ರಹಗಳಿವೆ. ಹರಿಹರ ಮೂರ್ತಿ ಇರುವ ಆಧಾರಪೀಠದ ಮೇಲೆ ಹರಿ ಮತ್ತು ಹರನ ವಾಹನಗಳಾದ ಗರುಡ ಮತ್ತು ನಂದಿಯನ್ನು ಶಿಲ್ಪಿ ಕಡೆದಿದ್ದಾನೆ.

ಪಾರ್ವತಿ ಅಮ್ಮನವರಿಗಾಗಿ ದೇವಾಲಯದ ಪ್ರಾಕಾರದಲ್ಲಿ ಪ್ರತ್ಯೇಕ ಗುಡಿ ಇದ್ದು, ಇಲ್ಲಿರುವ ಗರ್ಭಗೃಹದಲ್ಲಿರುವ ವಿಗ್ರಹವೂ ಅಷ್ಟೇ ಸುಂದರವಾಗಿದೆ. ಎರಡೂವರೆ ಅಡಿ ಎತ್ತರದ ಪೀಠದ ಮೇಲಿರುವ ವಿಗ್ರಹದ ಪ್ರಭಾವಳಿಯಲ್ಲಿ ಮತ್ತು ಕಿರೀಟದಲ್ಲಿ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಇದು ಶಿಲ್ಪಿಯ ಕೈಚಳಕಕ್ಕೆ ಸಾಕ್ಷಿಯಾಗಿದೆ. ಶೈವಾಗಮದ ರೀತ್ಯ ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ.

ಪಕ್ಕದಲ್ಲೇ ಬಹು ಪ್ರಾಚೀನವಾದ ಸುತ್ತೂರು ಮಠದಲ್ಲಿ ಶಿವರಾತ್ರಿ ಸ್ವಾಮಿಗಳ ಮತ್ತು ಇತರ ಸಂತರ ಗದ್ದುಗೆಗಳು ಮತ್ತು ಮಹದೇಶ್ವರರ ಬೀಸುವಕಲ್ಲು ಇದೆ. ಇತಿಹಾಸ ಸಾರುವ, ಜ್ಞಾನದ ಹಸಿವು ತೀರಿಸುವ ಅದ್ಭುತ ವಸ್ತು ಸಂಗ್ರಹಾಲಯ ಹಾಗೂ ಅತಿಥಿಗೃಹಗಳೂ ಇವೆ. ಭಕ್ತರಿಗೆ ಇಲ್ಲಿ ದಾಸೋಹವೂ ನಡೆಯುತ್ತದೆ. ಉಚಿತ ವಸತಿ ನಿಲಯವೂ ಇದೆ.

ದೇವಾಲಯದ ಪಕ್ಕದಲ್ಲೇ ಇರುವ ತೆರೆದ ನೀರು ಸೇದುವ ಸಿಹಿ ನೀರಿನ ಬಾವಿ ಸಹ ಕಲಾತ್ಮಕತೆಯಿಂದ ಕೂಡಿದೆ.

ನಂಜನಗೂಡಿನಿಂದ 15 ಕಿ.ಮೀ. ದೂರದಲ್ಲಿರುವ ಸುತ್ತೂರಿಗೆ ನೇರ ಬಸ್ ಸೌಕರ್ಯವಿದೆ.

ಹಿಂದಿನ ಲೇಖನಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಿ.ರಿಪೋರ್ಟ್ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಕೆ
ಮುಂದಿನ ಲೇಖನಬ್ಯಾಂಕಿಗೆ ಖೋಟಾನೋಟು ಜಮಾ ಮಾಡಿ ಹೊಸ ನೋಟಿಗೆ ಬೇಡಿಕೆ ಇಟ್ಟಿದ್ದ ಮಹಿಳೆಯ ಬಂಧನ