ಬೆಳಗಾವಿ, ಮೇ 26: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ರಾಂಗ್ ಸೈಡ್ನಲ್ಲಿ ಬಂದ ಗೂಡ್ಸ್ ಆಟೋ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ದಂಪತಿ ಹಾಗೂ ಒಂಬತ್ತು ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಬೊಮ್ಮನಾಳ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮಾನೆ (27), ಅವರ ಪತ್ನಿ ಸಾಕ್ಷಿ ಮಾನೆ (23) ಮತ್ತು ಒಂಬತ್ತು ತಿಂಗಳ ಮಗು ಸಮರ್ಥ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮಹಾಂತೇಶ್ ಮಾನೆ ಅವರು ಕುಟುಂಬದೊಂದಿಗೆ ಬೈಕ್ನಲ್ಲಿ ಬೊಮ್ಮನಾಳ ಗ್ರಾಮದಿಂದ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ರಸ್ತೆಯ ಎದುರು ದಿಕ್ಕಿನಿಂದ ಅತಿವೇಗವಾಗಿ ಹಾಗೂ ರಾಂಗ್ ಸೈಡ್ನಲ್ಲಿ ಬಂದ ಗೂಡ್ಸ್ ಆಟೋ ಬೈಕ್ಗೆ ನೇರವಾಗಿ ಢಿಕ್ಕಿ ಹೊಡೆದಿದೆ.
ಡಿಕ್ಕಿಯ ಭಾರೀ ಪರಿಣಾಮಕ್ಕೆ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ದಂಪತಿ ಹಾಗೂ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಬಳಿಕ ಗೂಡ್ಸ್ ಆಟೋ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಮಗುವಿನ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬೊಮ್ಮನಾಳ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿದೆ. ಪ್ರಕರಣ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪರಾರಿಯಾದ ಆಟೋ ಚಾಲಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

















