ಮನೆ ಸುದ್ದಿ ಜಾಲ ರಾಜ್ಯದಲ್ಲಿ ವಿದ್ಯುತ್ ವಿತರಣೆ ಖಾಸಗಿಗೆ? KERC ಮುಂದೆ Tata Power ಅರ್ಜಿ !

ರಾಜ್ಯದಲ್ಲಿ ವಿದ್ಯುತ್ ವಿತರಣೆ ಖಾಸಗಿಗೆ? KERC ಮುಂದೆ Tata Power ಅರ್ಜಿ !

0

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಕರ್ನಾಟಕದಲ್ಲಿ ವಿದ್ಯುತ್ ವಿತರಣೆ ಸೇವೆಗೆ ಖಾಸಗಿ ಕಂಪನಿಗಳ ಪ್ರವೇಶ ಸಾಧ್ಯತೆ ಹೆಚ್ಚಾಗಿದ್ದು, ಗ್ರಾಹಕರು ಯಾವ ಕಂಪನಿಯಿಂದ ಹಾಗೂ ಯಾವ ದರದಲ್ಲಿ ವಿದ್ಯುತ್ ಖರೀದಿಸಬೇಕು ಎಂಬ ಆಯ್ಕೆಯನ್ನು ಹೊಂದುವ ಅವಕಾಶ ಸಿಗಬಹುದು.

ದೆಹಲಿ, ಒಡಿಶಾ, ಮುಂಬೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಮಾದರಿಯಂತೆ, ಕರ್ನಾಟಕದಲ್ಲೂ ಇಂಧನ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ದಾರಿ ತೆರೆದಿರುವ ಬೆಳವಣಿಗೆ ನಡೆದಿದೆ. Tata Power ಕಂಪನಿಯು BESCOM , HESCOM , CESC , MESCOM ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ವಿತರಣಾ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಗೆ ಅರ್ಜಿ ಸಲ್ಲಿಸಿದೆ.

ಇದಲ್ಲದೆ ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಮೈಸೂರು, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ವಿದ್ಯುತ್ ವಿತರಣಾ ಹಕ್ಕುಗಳನ್ನು ಕೋರಿ ಕಂಪನಿ ಇತ್ತೀಚೆಗೆ ಮನವಿ ಸಲ್ಲಿಸಿದೆ ಎಂದು KERC ಮೂಲಗಳು ಮಾಹಿತಿ ನೀಡಿವೆ.ಕರ್ನಾಟಕ ವಿದ್ಯುತ್ ಕಾಯ್ದೆ 2002 ಮತ್ತು Electricity Act 2003 ರ ಸೆಕ್ಷನ್ 14 ಅಡಿಯಲ್ಲಿ Tata Power ಅರ್ಜಿ ಸಲ್ಲಿಸಿದೆ ಎಂದು KERC ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ. ಈ ಕಾನೂನು ಪ್ರಕಾರ ಖಾಸಗಿ ಸಂಸ್ಥೆಗಳು ವಿತರಣಾ ಪರವಾನಗಿ ಪಡೆಯಲು ಅವಕಾಶವಿದ್ದು, ಕಂಪನಿಗಳು ತಮ್ಮದೇ ಮೂಲಸೌಕರ್ಯ ಹಾಗೂ ನೆಟ್ವರ್ಕ್ ಹೊಂದಿರಬೇಕಾಗಿದೆ.

ಮೊದಲು ಕಂಪನಿಯ ಅರ್ಜಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ನಂತರ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಬಳಿಕ ಅಂತಿಮ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಗೆ ಇನ್ನೂ ಕೆಲವು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.“ಇದನ್ನು ಸಂಪೂರ್ಣ ಖಾಸಗೀಕರಣ ಎಂದು ಕರೆಯಲು ಸಾಧ್ಯವಿಲ್ಲ. ಇದು ಖಾಸಗಿ ವಿದ್ಯುತ್ ವಿತರಣೆಗೆ ಅವಕಾಶ ನೀಡುವ ಕ್ರಮವಾಗಿದೆ. ಕಳೆದ 20 ವರ್ಷಗಳಿಂದ ಈ ನಿಯಮಗಳು ಜಾರಿಯಲ್ಲಿದ್ದರೂ, ಈ ರೀತಿಯ ಅರ್ಜಿ ಇದೀಗ ಮೊದಲ ಬಾರಿಗೆ ಸಲ್ಲಿಕೆಯಾಗಿದೆ” ಎಂದು ಪಿ. ರವಿ ಕುಮಾರ್ ಹೇಳಿದ್ದಾರೆ.

ಇಂಧನ ಇಲಾಖೆಯ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, “ಅದೇ ಗ್ರಾಹಕರಿಗೆ ಹೊಸ ಸಂಸ್ಥೆಯೊಂದು ಸೇವೆ ನೀಡಲು ಮುಂದೆ ಬರುತ್ತಿದೆ. ಕಾನೂನಿನ ಅಡಿಯಲ್ಲಿ ಇದಕ್ಕೆ ಅವಕಾಶವಿದೆ. ಆದರೆ ಕೆಲವು ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ” ಎಂದು ಹೇಳಿದ್ದಾರೆ.ವಿದ್ಯುತ್ ಕ್ಷೇತ್ರ ತಜ್ಞರ ಅಭಿಪ್ರಾಯದ ಪ್ರಕಾರ, ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ಆರೋಗ್ಯಕರ ಸ್ಪರ್ಧೆ ಹಾಗೂ ವೃತ್ತಿಪರ ಸೇವೆಗಳಿಗೆ ಉತ್ತೇಜನ ಸಿಗಬಹುದು.

ವಿದ್ಯುತ್ ತಜ್ಞ ಮತ್ತು ನಾಗರಿಕ ಹೋರಾಟಗಾರ ಮುರಳೀಧರ್ ರಾವ್ ಮಾತನಾಡಿ, “ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯಿಂದ ವಿದ್ಯುತ್ ಜಾಲ ವ್ಯವಸ್ಥೆ ಮತ್ತಷ್ಟು ಬಲವಾಗುತ್ತದೆ. ಉತ್ತಮ ಮೂಲಸೌಕರ್ಯದಿಂದ ಪ್ರಸರಣ ಮತ್ತು ವಿತರಣಾ ನಷ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗಳು ಕಡಿಮೆಯಾಗಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ.